ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮಹಾದೇವಿ ಬಸವ ಮಂಟಪಕ್ಕೆ ಇಟ್ಟಿಗೆ, ಸಿಮೆಂಟ್ ಹೊತ್ತಿದ್ದರು...

Last Updated 14 ಮಾರ್ಚ್ 2019, 12:42 IST
ಅಕ್ಷರ ಗಾತ್ರ

ಕೂಡಲಸಂಗಮ: ಬೆಂಗಳೂರಿನ ಬಸವ ಮಂಟಪದಲ್ಲಿ ಹಳೆಯ ಭಾವಚಿತ್ರಗಳ ಸಂಗ್ರಹ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಎರಡು ಭಾವಚಿತ್ರ ನನ್ನ ಗಮನ ಸೆಳೆದವು.

ಬೆಂಗಳೂರಿನಲ್ಲಿನೈಋತ್ಯ ರೈಲ್ವೆಯಲ್ಲಿಹಿರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚ್ಚಿದಾನಂದ ಚಟ್ನಳಿ ಅವರು ಮಾತೆ ಮಹಾದೇವಿ ಕುರಿತ ಬಿಚ್ಚಿಟ್ಟನೆನಪುಗಳಿವು.

ನನಗರಿವಿಲ್ಲದೆ ಕಣ್ಣಿನಿಂದ ಅಶ್ರು ಬಿಂದು! ಕಾರಣ, ಅವು 1972ರಲ್ಲಿ ಬೆಂಗಳೂರಿನ ಬಸವ ಮಂಟಪ ಕಟ್ಟುವಾಗ ತೆಗೆದ ಆ ಚಿತ್ರಗಳಲ್ಲಿ ಮಾತಾಜಿಯವರು ತಲೆಯ ಮೇಲೆ ಸೆರಗು ಹೊದ್ದು ಸಿಮೆಂಟಿನ ಬುಟ್ಟಿ ಹೊತ್ತಿದ್ದಾರೆ.ಇನ್ನೊಂದರಲ್ಲಿ ಗಂಗಾ ಮಾತಾಜಿ ಇಟ್ಟಿಗೆ ಹೊತ್ತಿದ್ದಾರೆ. ಮೂರನೇ ಚಿತ್ರದಲ್ಲಿ ಲಿಂಗಾನಂದ ಅಪ್ಪಾಜಿ ಬುಟ್ಟಿಗೆ ಕಾಂಕ್ರಿಟ್ ತುಂಬುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ನಾವು ಯಾವ ಕಟ್ಟಡದಲ್ಲಿ ಕುಳಿತು, ಪ್ರಾರ್ಥನೆ ಮಾಡುತ್ತಿದ್ದೇವೆಯೋ ಅದು ಸಾಮಾನ್ಯವಾದುದಲ್ಲ. ಅದರಲ್ಲಿ ಈ ಮಹನೀಯರ ಬೆವರಿನ ಹನಿ ಸೇರಿಕೊಂಡಿವೆ. ಅವರ ಪರಿಶ್ರಮದಿಂದ ಬಸವ ಮಂಟಪ ನಿರ್ಮಾಣವಾಗಿದೆ.ಪಕ್ಕದ ಬಾಡಿಗೆ ಮನೆಯಲ್ಲಿ ಉಳಿದು ಕಟ್ಟಡ ಕಟ್ಟಲು ಹಗಲೆಲ್ಲಾ ದುಡಿದು ಸಾಯಂಕಾಲ ಪ್ರವಚನ ಮಾಡಿದ್ದಾರೆ.

ಮಾತಾಜಿ ತಂದೆ ಡಾ.ಬಸಪ್ಪ ಬೆಂಗಳೂರಿನ ಬಸವ ಮಂಟಪ ನಿವೇಶನದ ದಾನಿಗಳು. ಮಗಳನ್ನು ವೈದ್ಯಳನ್ನಾಗಿಸಿ ಅದೇಸ್ಥಳದಲ್ಲಿ ನರ್ಸಿಂಗ್ ಹೋಮ್ (ಆಸ್ಪತ್ರೆ) ಕಟ್ಟಿಸಬೇಕು ಎಂಬ ಸಂಕಲ್ಪದಿಂದ ಖರೀದಿಸಿದ್ದರು. ಆ ನಿವೇಶನದಲ್ಲಿ ಆಸ್ಪತ್ರೆಯಾಗಲಿಲ್ಲ, ಅವರ ಮಗಳು ವೈದ್ಯರಾಗಲಿಲ್ಲ. ಆದರೇನಂತೆ? ಅದಕ್ಕೂ ಮಿಗಿಲಾದ ಭವರೋಗ ವೈದ್ಯರಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮನೆಯಲ್ಲಿ ವಿಷ ತಂದಿಟ್ಟವರು ಪ್ರವಚನ ಕೇಳಿ, ಹೊಸ ಮನುಷ್ಯರಾಗಿ ಪುನರ್ಜನ್ಮ ಪಡೆದಂತೆ ಎದ್ದು ನಿಂತಿದ್ದಾರೆ.

ತಮ್ಮ 19ನೇ ವಯಸ್ಸಿನಲ್ಲಿಯೇ ಜಂಗಮ ದೀಕ್ಷೆ ಪಡೆದ ಮಾತಾಜಿ ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಕೈಜೋಡಿಸಿದ್ದಾರೆ.ಆದಿ ಶರಣರ ಸಂಕಲ್ಪದಂತೆ ಕಾರ್ಯನಿರ್ವಹಿಸಿದ್ದಾರೆ ಎನ್ನುವಲ್ಲಿ ಸಂಶಯವೇ ಇಲ್ಲ.

ಬಸವತತ್ವ ಪ್ರಚಾರಕ್ಕೆ ಹಲವು ರ‍್ಯಾಲಿ, ಪ್ರವಾಸ, ಚಲನಚಿತ್ರ

ಮಾತೆ ಮಹಾದೇವಿ ಯುವ ಜನಾಂಗದಲ್ಲಿ ಬಸವ ತತ್ವ ಬಿತ್ತರಿಸಬೇಕು, ಅವರಲ್ಲಿ ಶರಣ ಸಂಸ್ಕೃತಿಬೆಳೆಸಬೇಕು ಎಂಬ ಉದ್ದೇಶದಿಂದ 1980ರಲ್ಲಿ ಲಿಂಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆ ಆರಂಭಿಸಿದರು. ಅದು ಇಂದು ದೇಶದ ಎಂಟುರಾಜ್ಯಗಳಲ್ಲಿ 1200ಕ್ಕೂ ಅಧಿಕ ಶಾಖೆ ಹೊಂದಿ ಬಸವ ಸಂಘಟನೆ, ಶರಣಸಂಸ್ಕೃತಿ ಬಿಂಬಿಸುತ್ತಿವೆ.

ಬಸವಣ್ಣನವರ ಜೀವನ ಚರಿತ್ರೆ, ವಿಚಾರಗಳನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ 1983ರಲ್ಲಿ ‘ಕ್ರಾಂತಿಯೋಗಿ ಬಸವಣ್ಣ’ ಚಲನಚಿತ್ರ ನಿರ್ಮಿಸಿದ್ದರು.

ದೆಹಲಿ, ಚಿತ್ರದುರ್ಗ, ಸಾಸಲಟ್ಟಿ, ಬೀದರ್, ಕಲಬುರ್ಗಿ, ಬಳ್ಳಾರಿ, ಭದ್ರಾವತಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಬಸವ ಮಂಟಪ ನಿರ್ಮಿಸಿ ಸಮುದಾಯ ಪ್ರಾರ್ಥನೆ, ಶರಣ ಸಂಗ, ವಚನ ಪಠಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದೇಶದಲ್ಲೂ ಬಸವ ತತ್ವ ಪ್ರಸಾರ ಮಾಡುವ ಉದ್ದೇಶದಿಂದ 1976ರಲ್ಲಿ ಇಂಗ್ಲೆಂಡ್, 1980, 1981, 2004ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆದೊರಕಬೇಕು ಎಂಬ ಹೋರಾಟ, ಸಂಘಟನೆಗಾಗಿ 2005ರಲ್ಲಿ ದೆಹಲಿಯಲ್ಲಿ ಪ್ರಥಮ ಲಿಂಗಾಯತ ಧರ್ಮ ಸಮ್ಮೇಳನ, 2008ರಲ್ಲಿ ಏಪ್ರಿಲ್‌ನಲ್ಲಿ ಚೆನ್ನೈನಲ್ಲಿ ಎರಡನೇ ಲಿಂಗಾಯತ ಧರ್ಮ ಸಮ್ಮೇಳನ, 2011ರಲ್ಲಿ ಪುಣೆ, 2012ರಲ್ಲಿ ಬೆಂಗಳೂರಿನಲ್ಲಿ ರ‍್ಯಾಲಿ, 2013 ಮತ್ತು 2019ರಲ್ಲಿ ದೆಹಲಿಯಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT