ಸೋಮವಾರ, ಜುಲೈ 26, 2021
22 °C

ಡಿಸಿಸಿ ಬ್ಯಾಂಕ್ ಕಾರ್ಯವೈಖರಿ: ಸಚಿವ ಮಾಧುಸ್ವಾಮಿ -ಸೋಮಶೇಖರ್ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾಲ ಮನ್ನಾ ಹಣವನ್ನು ಡಿಸಿಸಿ ಬ್ಯಾಂಕುಗಳು ರೈತರ ಹಳೇ ಬಾಕಿ ಚುಕ್ತಾ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿವೆ. ಇದು ಸರಿಯಲ್ಲ, ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಚಿವ ಸಂಪುಟ ಸಭೆಯಲ್ಲಿ ಏರಿದ ಧ್ವನಿಯಲ್ಲಿ ಮಾತನಾಡಿದರು.

‘ಸರ್ಕಾರ ರೈತರ ಅನುಕೂಲಕ್ಕಾಗಿ ಸಾಲ ಮನ್ನಾ ಮಾಡಿದೆ. ಆದರೆ, ಆ ಹಣವನ್ನು ಡಿಸಿಸಿ ಬ್ಯಾಂಕ್‌ಗಳು ಸಣ್ಣಪುಟ್ಟ ಸಹಕಾರ ಸಂಘಗಳಿಗೆ ತಲುಪಿಸುತ್ತಿಲ್ಲ. ಇದರಿಂದ ರೈತರ ಸಾಲ ಮನ್ನಾ ಆಗುತ್ತಿಲ್ಲ. ಅದನ್ನು ಬೇರೆ ಕಾರಣಕ್ಕೆ ಉಪಯೋಗಿಸುವುದು ಎಷ್ಟು ಸರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ‘ಇದು ಸಹಕಾರ ವಲಯದ ವಿಚಾರ. ಡಿಸಿಸಿ ಬ್ಯಾಂಕುಗಳೂ ಉಳಿಯಬೇಕಲ್ಲ, ನಿಮಗೆ ಅವೆಲ್ಲ ಗೊತ್ತಾಗಲ್ಲ’ ಎಂದು ಹೇಳಿದ್ದು ಮಾಧುಸ್ವಾಮಿಯವರನ್ನು ಸಿಟ್ಟಿಗೆಬ್ಬಿಸಿತು.

‘ನನಗೂ ಸಹಕಾರ ವಿಚಾರ ಗೊತ್ತು, ಸಹಕಾರ ವಲಯದಲ್ಲಿ ಇದ್ದವನೇ, ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ. ರೈತರಿಗೆ ಅನ್ಯಾಯವಾಗುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಮಾಧುಸ್ವಾಮಿ ಹೇಳಿದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಉಳಿದ ಸಚಿವರು ಇಬ್ಬರನ್ನೂ ಸಮಾಧಾನ ಪಡಿಸಿ, ವಿಷಯಕ್ಕೆ ತೆರೆ ಎಳೆದರು ಎಂದು ಮೂಲಗಳು ತಿಳಿಸಿವೆ.

‘ವರ್ಗಾವಣೆ ವಿಚಾರ ನಮ್ಮನ್ನೂ ಕೇಳಿ’: ‘ನಮ್ಮ  ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ವಿಚಾರ ನಮಗೇ ಗೊತ್ತಾಗುವುದಿಲ್ಲ. ವರ್ಗಾವಣೆಗಳನ್ನು ನಮ್ಮ ಗಮನಕ್ಕೆ ತಂದು ಮಾಡುವುದು ಸೂಕ್ತ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು ಎನ್ನಲಾಗಿದೆ.

ಇದಕ್ಕೆ ಹಲವು ಸಚಿವರೂ ಧ್ವನಿಗೂಡಿಸಿದರು. ಆದರೆ, ಸಲಹೆಯನ್ನು ನಯವಾಗಿ ತಿರಸ್ಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಹೊಸ ಪರಂಪರೆ ಹುಟ್ಟು ಹಾಕಲು ಸಾಧ್ಯವಿಲ್ಲ. ನಿಮಗೆ ಏನು ಕೆಲಸಗಳು ಆಗಬೇಕೊ, ನನ್ನ ಬಳಿಗೆ ಬನ್ನಿ. ಯಾವುದಕ್ಕೂ ಇಲ್ಲ ಎನ್ನುವುದಿಲ್ಲ’ ಎಂಬುದಾಗಿ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು