ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳ ಖಾತೆಗೆ ₹ 6.30 ಕೋಟಿ ಜಮೆ !

ಕೆನರಾ ಬ್ಯಾಂಕ್‌ ವ್ಯವಸ್ಥಾಪಕಿ ಸೇರಿ 20 ಮಂದಿ ವಿರುದ್ಧ ಎಫ್ಐಆರ್‌
Last Updated 21 ಡಿಸೆಂಬರ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸಂದಾಯ ಮಾಡಬೇಕಿದ್ದ₹ 6.30 ಕೋಟಿ ಹಣವನ್ನು ಮಧ್ಯವರ್ತಿಗಳ ಖಾತೆಗೆ ಜಮೆ ಮಾಡಿ ಅಕ್ರಮ ಎಸಗಲಾಗಿದ್ದು, ಈ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ. ಕಾಮಾಕ್ಷಿ ದೂರು ನೀಡಿದ್ದಾರೆ. ಕೆನರಾ ಬ್ಯಾಂಕ್ ವ್ಯವಸ್ಥಾಪಕಿ, ಬ್ಯಾಂಕ್‌ ಹಾಗೂ ನಿಗಮದ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘2016–17 ಹಾಗೂ 2017–18ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಯೋಜನೆ ಹಾಗೂ ಐ.ಎಸ್‌.ಟಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು. ಅದೇ ಹಣವನ್ನು ಮಧ್ಯವರ್ತಿಗಳ ಖಾತೆಗೆ ಜಮೆ ಮಾಡಲಾಗಿತ್ತು. ಆ ಬಗ್ಗೆ ಅನುಮಾನ ಬರುತ್ತಿದ್ದಂತೆ ಹಿರಿಯ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ’ ಎಂದು ಅವರು ತಿಳಿಸಿದರು.

ನಿಗಮದ ಸಿಬ್ಬಂದಿಯೂ ಭಾಗಿ: ‘ಫಲಾನುಭವಿಗಳ ಹಣವನ್ನು ಅಕ್ರಮವಾಗಿ ಮಧ್ಯವರ್ತಿಗಳ ಖಾತೆಗೆ ಜಮೆ ಮಾಡಲಾಗಿದೆ. ಬ್ಯಾಂಕ್‌ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಜೊತೆಗೇ ನಿಗಮದ ಸಿಬ್ಬಂದಿಯೂ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

‘ಕೆನರಾ ಬ್ಯಾಂಕ್‌ನ ಅಂದಿನ ವ್ಯವಸ್ಥಾಪಕಿ ಸುಲಕ್ಷಾ ಪೆಡನೇಕರ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ನಿಗಮದ ಸಿಬ್ಬಂದಿಯಾದ ಎಚ್‌.ಆರ್‌.ಅರುಣ್‌ಕುಮಾರ್, ಜೆ.ಜಿ.ಪದ್ಮನಾಭ್, ಇಂದಿರಮ್ಮ, ಪಿ. ಮಲ್ಲೇಶ್, ಎನ್‌. ಮುಕುಂದ, ಕಲ್ಪನಾ, ಪುಟ್ಟೀರಯ್ಯ, ಎಂ. ಲಿಂಗಣ್ಣ ಹಾಗೂ ಮಧ್ಯವರ್ತಿಗಳಾದ ಗೋವಿಂದರಾಜ್, ಮುರಳಿ, ಸೈಯದ್ ಸಾದಿಕ್, ಜಿಮರನ್ ಪಾಷ, ಅಮರ್, ಸತ್ಯನಾರಾಯಣ, ಜೆ. ಶ್ರೀಧರ್, ಕೆ. ಮಂಜುನಾಥ್, ಭುವನೇಶ್, ಕೋದಂಡರಾಮ್, ಜೀವರಾಜ್ ಸಹ ಆರೋಪಿಗಳಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT