ಗುರುವಾರ , ಆಗಸ್ಟ್ 5, 2021
22 °C
110 ಹಳ್ಳಿ ಯೋಜನೆ ಕಾಮಗಾರಿ ವಿಳಂಬ: ಸಂಚಾರ ದುಸ್ತರ

ಮಹದೇವಪುರ ವಿಧಾನಸಭಾ ಕ್ಷೇತ್ರ: ಬಿಸಿಲಾದರೆ ಧೂಳು, ಮಳೆಯಾದರೆ ಕೆಸರು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಒಳಚರಂಡಿ ಕಾಮಗಾರಿಗಾಗಿ ಬಗೆದು ಬಿಟ್ಟ ರಸ್ತೆಗಳು, ಅಲ್ಲಲ್ಲಿ ಮುಖ್ಯ ರಸ್ತೆಗಳು ಡಾಂಬರು ಕಂಡಿದ್ದರೆ, ಅಡ್ಡರಸ್ತೆಗಳೆಲ್ಲ ಗುಂಡಿಮಯ....

ಇದು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 31 ಹಳ್ಳಿಗಳ ಸ್ಥಿತಿ. 2007ರಲ್ಲಿ ಬಿಬಿಎಂಪಿ ಸೇರಿದ 110 ಹಳ್ಳಿಗಳಲ್ಲಿ ಅತೀ ಹೆಚ್ಚು 31 ಹಳ್ಳಿಗಳನ್ನು ಹೊಂದಿರುವ ದೊಡ್ಡ ಕ್ಷೇತ್ರ ಇದಾಗಿದೆ.

ಈ ಹಳ್ಳಿಗಳ ತುಂಬೆಲ್ಲಾ ಐ.ಟಿ ಕಂಪನಿಗಳೇ ತುಂಬಿಕೊಂಡಿವೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಕಟ್ಟಡಗಳು ಇವೆ. 110 ಹಳ್ಳಿ ಯೋಜನೆಯಡಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವ ಕಾರಣ ಹಳ್ಳಿಗಳು, ಬಡಾವಣೆಗಳನ್ನೆಲ್ಲಾ ಅಗೆದು ಪೈಪ್‌ಲೈನ್ ಮತ್ತು ಮ್ಯಾನ್‌ಹೋಲ್ ಅಳವಡಿಸಲಾಗುತ್ತಿದೆ.

ಹಗದೂರು, ಕಾಡುಗೋಡಿ, ಹೂಡಿ ಸೇರಿ ಕೆಲ ವಾರ್ಡ್‌ಗಳಲ್ಲಿ ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಒಳಚರಂಡಿ ಕಾಮಗಾರಿ ಕೆಲವೆಡೆ ಅಂತಿಮ ಹಂತದಲ್ಲಿದ್ದು, ಇನ್ನೂ ಹಲವೆಡೆ ಈಗ ಆರಂಭವಾಗಿದೆ. ವರ್ತೂರು ಸುತ್ತಮುತ್ತಲ ಬಡಾವಣೆಗಳು ಮತ್ತು ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ.

ಜಲ ಮಂಡಳಿ ತನ್ನ ಕೆಲಸ ಮುಗಿಸಿ ಅರೆಬರೆಯಾಗಿ ಮುಚ್ಚಿ ಹೋದ ಗುಂಡಿಗಳ ನಡುವೆ ವಾಹನ ಸಂಚಾರಕ್ಕೆ ಜನ ಪರದಾಡುತ್ತಿದ್ದಾರೆ. ಮಳೆ ಬಂದರೆ ಕೆಸರಿನ ಹೊಂಡಗಳಾಗಿ ಬಡಾವಣೆಗಳು ಮಾರ್ಪಡುತ್ತವೆ. ವರ್ತೂರಿನ ಬಾಳಗೆರೆ ರಸ್ತೆ ಬದಿಯ ಬಡಾವಣೆಯಲ್ಲಿ ಸಂಚಾರವೇ ಸಾಧ್ಯವಿಲ್ಲವಾಗಿದ್ದ ರಸ್ತೆಗೆ ಅಪಾರ್ಟ್‌ಮೆಂಟ್ ನಿವಾಸಿಗಳೇ ಸೇರಿ ಹಣ ಕೂಡಿಸಿಕೊಂಡು ರಸ್ತೆಗೆ ಕಾಂಕ್ರೀಟ್ ಮಿಶ್ರಣ ಸುರಿಸಿಕೊಂಡು ತಾತ್ಕಾಲಿಕವಾಗಿ ಸರಿಪಡಿಸಿಕೊಂಡಿದ್ದಾರೆ.

‘ಕಾವೇರಿ ನೀರು ಮತ್ತು ಒಳಚರಂಡಿ ಕಾಮಗಾರಿ ಹೆಸರಿನಲ್ಲಿ ವರ್ಷಗಟ್ಟಲೆಯಿಂದ ತೊಂದರೆ ಅನುಭವಿಸುತ್ತಿದ್ದೇವೆ. ಯಾರಿಗೆ ಹೇಳಿದರೂ ಸಮಸ್ಯೆ ಸರಿಯಾಗಲಿಲ್ಲ. ಹೀಗಾಗಿ, ನಾವೇ ಹಣ ಸಂಗ್ರಹಿಸಿ ಕಾಂಕ್ರಿಟ್ ಮಿಶ್ರಣ ಸುರಿಸಿಕೊಂಡಿದ್ದೇವೆ’ ಎಂದು ನಿವಾಸಿಗಳು ಹೇಳಿದರು.

ಹಗದೂರು ಮುಖ್ಯ ರಸ್ತೆ, ಇಮ್ಮಡಿಹಳ್ಳಿ ಮುಖ್ಯರಸ್ತೆ, ಚನ್ನಸಂದ್ರ ಮುಖ್ಯ ರಸ್ತೆಗಳು ಅಭಿವೃದ್ಧಿ ಕಂಡಿವೆ. ಈ ಮುಖ್ಯ ರಸ್ತೆಗಳಿಂದ ಯಾವುದೇ ಅಡ್ಡ ರಸ್ತೆಗಳಿಗೆ ವಾಹನಗಳನ್ನು ಉಳಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ.

ವೈಟ್‌ಫೀಲ್ಡ್ ಅಂಬೇಡ್ಕರ್ ನಗರದಲ್ಲಿ ಒಳಚರಡಿ ಕಾಮಗಾರಿ ನಡೆಯುತ್ತಿದೆ. ಕಾಡುಗೋಡಿ ಸಾಯಿಬಾಬಾ ಆಶ್ರಮ ಎದುರಿನ ಮೇಲ್ಸೇತುವೆ ಕೆಳಗೆ ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಈಗ ಆರಂಭಿಸಲಾಗಿದೆ. ಒಂದು ಬದಿಯಲ್ಲಿ ಸಂಪೂರ್ಣವಾಗಿ ಅಗೆಯಲಾಗಿದ್ದು, ಆ ಭಾಗದಲ್ಲಿನ ಅಂಗಡಿಗಳಿಗೆ ಹೋಗಿ ಬರಲು ದಾರಿಯೇ ಇಲ್ಲವಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಮರು ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಕುಡಿಯುವ ನೀರಿನ ಕಾಮಗಾರಿ ಪೂರ್ಣ

‘ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಶೇ 98ರಷ್ಟು ಪೂರ್ಣಗೊಂಡಿದ್ದರೆ, ಒಳಚರಂಡಿ ಕಾಮಗಾರಿ ಶೇ 70ರಷ್ಟು ಮುಗಿದಿದೆ’ ಎಂದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‌ಅತ್ಯಂತ ದೊಡ್ಡ ಕ್ಷೇತ್ರ ಮತ್ತು 110 ಹಳ್ಳಿ ಯೋಜನೆಯಡಿಯೂ ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕಸವನಹಳ್ಳಿ, ಹರಳೂರು, ಹಗದೂರು ಸೇರಿ ಹಲವು ಮುಖ್ಯ ರಸ್ತೆಗಳಿಗೆ ಡಾಂಬರು ಹಾಕಲಾಗಿದೆ ಎಂದು ಅವರು ತಿಳಿಸಿದರು.

ರಸ್ತೆ ಮರು ನಿರ್ಮಾಣಕ್ಕೆ ಕನಿಷ್ಠ ₹350 ಕೋಟಿಯಾದರೂ ಅನುದಾನ ಬೇಕಿತ್ತು. ₹210 ಕೋಟಿ ಅನುದಾನ ದೊರೆತಿದೆ. ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮುಗಿದಿರುವ ಕಡೆ ಕೂಡಲೇ ರಸ್ತೆ ಮರು ನಿರ್ಮಾಣ ಕಾಮಗಾರಿ ಆರಂಭಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು ಸೂಚನೆ ನೀಡಿದ್ದಾರೆ ಎಂದು ಅಧಿಕಾರಿ ವಿವರಿಸಿದರು.

110 ಹಳ್ಳಿ ಯೋಜನೆ ಕಾಮಗಾರಿ ಕುರಿತು ಸಚಿವ ಅರವಿಂದ ಲಿಂಬಾವಳಿ ಅವರ ಪ್ರತಿಕ್ರಿಯೆ ಪಡೆಯಲು ಸತತ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಬರಲಿಲ್ಲ.

31 ಹಳ್ಳಿಗಳು

ತೂಬರಹಳ್ಳಿ, ಬೆಳತ್ತೂರು, ವಾರಣಾಸಿ, ಬೈರತಿ, ಬಿಳೇಶಿವಾಲೆ, ಕಾಡುಬೀಸನಹಳ್ಳಿ, ಜುನ್ನಸಂದ್ರ, ಕಸವನಹಳ್ಳಿ, ಬೆಳ್ಳಂದೂರು, ದೇವರಬಿಸನಹಳ್ಳಿ, ಕರಿಯಮ್ಮನ ಅಗ್ರಹಾರ, ಕೈಕೊಂಡ್ರಹಳ್ಳಿ, ಬೋಗನಹಳ್ಳಿ, ದೊಡ್ಡಕನ್ನಲ್ಲಿ, ಹರಳೂರು, ಅಂಬಲೀಪುರ, ಬಳಗೆರೆ, ಗುಂಜೂರು (ಗುಂಜೂರು ಪಾಳ್ಯ, ಗುಂಜೂರು ಹೊಸಹಳ್ಳಿ), ವರ್ತೂರು, ಸೋರಹುಣಸೆ, ಚಿಕ್ಕ ಬೆಳ್ಳಂದೂರು, ಪಣತ್ತೂರು (ಪಣತ್ತೂರು ದಿಣ್ಣೆ), ಮಧುರಾನಗರ, ನಾಗೊಂಡನಹಳ್ಳಿ, ರಾಮಗೊಂಡನಹಳ್ಳಿ, ಇಮ್ಮಡಿಹಳ್ಳಿ, ಹಗದೂರು, ಸಿದ್ಧಾಪುರ, ಚನ್ನಸಂದ್ರ, ಎ.ಕೆ.ಜಿ. ಕಾಲೊನಿ, ಕಾಡುಗೋಡಿ ಪ್ಲಾಂಟೇಷನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು