ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾವೀರರ ಸ್ಮರಣೆ, ವಿಶ್ವಶಾಂತಿಗಾಗಿ ಕಾಲ್ನಡಿಗೆ

ಭಗವಾನ ಮಹಾವೀರರ 2623ನೇ ಜನ್ಮ ಕಲ್ಯಾಣ ಮಹೋತ್ಸವ
Published 21 ಏಪ್ರಿಲ್ 2024, 16:09 IST
Last Updated 21 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಭಾನುವಾರ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಸಮಸ್ತ ಜೈನ ಸಮಾಜದ ವತಿಯಿಂದ ಬೆಳಿಗ್ಗೆ 9 ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ’ವಿಶ್ವ ಶಾಂತಿಗಾಗಿ ಕಾಲ್ನಡಿಗೆ’ಯನ್ನು ಹಮ್ಮಿಕೊಳ್ಳಲಾಗಿತ್ತು.

ಸಮಸ್ತ ಜೈನ ಸಮಾಜ ಮತ್ತು ಜೈನ ಯುವ ಸಂಘಟನೆಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಘಟನೆಯ ಪದಾಧಿಕಾರಿಗಳು ಮಹಾವೀರರ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ವೇದಿಕೆಗೆ ಮೆರವಣಿಗೆಯಲ್ಲಿ ತಂದು, ಯತಿಗಳ ಸಮ್ಮುಖದಲ್ಲಿ ಅಭಿಷೇಕ ಮಾಡಿದರು.

ಇದಕ್ಕೂ ಮೊದಲು ಜೈನ ಸಮುದಾಯದವರು ವಿಶ್ವ ಶಾಂತಿ ಸಾರಲು ಪುರಭವನ ವೃತ್ತದಿಂದ ಜಾಥಾ ನಡೆಸಿದರು. ಸಮುದಾಯದ ಯುವತಿಯರು, ಮಹಿಳೆಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಾಲ್ನಡಿಗೆ ವೇಳೆ ಭಗವಾನ್‌ ಮಹಾವೀರರ ಸಂದೇಶಗಳನ್ನು ಸಾರಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವೇಷಧಾರಿಗಳು ಸಾಮಾಜಿಕ ಜಾಲತಾಣಗಳು, ಕುಡಿಯುವ ನೀರಿನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದರು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಕಣ್ಮನ ಸೆಳೆದವು.

ಬಳಿಕ ಜೈನ ಯುವ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಜೈನ ಆಚಾರ್ಯ ಭಗವಂತರು, ಸಾಧುಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 2 ಗಂಟೆಗೆ ಜೈನ ಸನ್ಯಾಸಿಗಳು ಮಹಾಮಂಗಳೀಕವನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ, ಉಚಿತ ಕಣ್ಣು ಪರೀಕ್ಷೆ, ಮಧುಮೇಹ ಪರೀಕ್ಷೆ ಶಿಬಿರಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಜನರಿಗೆ ಮಜ್ಜಿಗೆ, ಹಾಲು ವಿತರಿಸಲಾಯಿತು. ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ‌

ಮಹಾವೀರ ಭಾವಚಿತ್ರಗಳನ್ನು ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಜಾವಾಣಿ ಚಿತ್ರ
ಮಹಾವೀರ ಭಾವಚಿತ್ರಗಳನ್ನು ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಜಾವಾಣಿ ಚಿತ್ರ
ಮಹಾವೀರ ಜಯಂತಿ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ನೀರಿನ ಮಹತ್ವ ಸಾರುವ ವೇಷ ಧರಿಸಿದ್ದ ಬಾಲಕ
– ಪ್ರಜಾವಾಣಿ ಚಿತ್ರಗಳು
ಮಹಾವೀರ ಜಯಂತಿ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ನೀರಿನ ಮಹತ್ವ ಸಾರುವ ವೇಷ ಧರಿಸಿದ್ದ ಬಾಲಕ – ಪ್ರಜಾವಾಣಿ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT