ಬೆಂಗಳೂರು: ‘ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳುತ್ತಿದೆ. ಆದರೆ, ರಾತ್ರಿ ಒಂದು ಗಂಟೆಯವರೆಗೆ ಬ್ಯಾಂಡ್ ಬಾರಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ಇದು ಬ್ರ್ಯಾಂಡ್ ಬೆಂಗಳೂರು ಆಗುತ್ತದೊ, ಬ್ಯಾಂಡ್ ಬೆಂಗಳೂರು ಆಗುತ್ತದೊ ಗೊತ್ತಿಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮಕ್ಷತ್ರಿಯ ಗಾಣಿಗ ಸಮುದಾಯದ ವೇಣುಗೋಪಾಲಕೃಷ್ಣ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ‘ಬೆಂಗಳೂರು ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಿ’ ಎಂದು ಸಲಹೆ ನೀಡಿದರು.
‘ಗಾಣಿಗ ಸಮಾಜ ತನ್ನದೇ ಆದ ಇತಿಹಾಸ ಪರಂಪರೆ ಹೊಂದಿದೆ. ಚಿಂತನೆಯಲ್ಲಿ ಬಹಳ ಶ್ರೇಷ್ಠವಾಗಿದೆ. ವಿಜಯನಗರದ ಅರಸರ ಕಾಲದಿಂದಲೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಬಡತನದಿಂದ ಬಂದು ಬಡವರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಅವರು ಗಾಣಿಗ ವೃತ್ತಿ ಮಾಡುತ್ತ ಬೆಳೆದವರು. ಅವರನ್ನು ನೋಡಿದಾಗ ಈ ಸಮಾಜದ ಶಕ್ತಿ ಎಷ್ಟಿದೆ ಅಂತ ಗೊತ್ತಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ, ಚನ್ನಮ್ಮ ಬಸವರಾಜ ಬೊಮ್ಮಾಯಿ, ಮಂಜುನಾಥ ಉಡುಪಿ ಭಾಗವಹಿಸಿದ್ದರು.