ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ–ತಾಯಿ, ಮಾವನಿಗೆ ಚಾಕುವಿನಿಂದ ಇರಿದ ಯುವಕ

ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಮುಂದಾಗಿದ್ದಕ್ಕೆ ಕೃತ್ಯ
Last Updated 9 ಸೆಪ್ಟೆಂಬರ್ 2022, 20:01 IST
ಅಕ್ಷರ ಗಾತ್ರ

ಬೆಂಗಳೂರು: ಪುನರ್ವಸತಿ ಕೇಂದ್ರಕ್ಕೆ ಸೇರಿಸುತ್ತಿದ್ದಾರೆಂಬ ಕಾರಣಕ್ಕೆ ತಂದೆ–ತಾಯಿ ಹಾಗೂ ಸೋದರ ಮಾವನಿಗೆ ಚಾಕುವಿನಿಂದ ಇರಿದಿರುವ ಆರೋಪಿ ತೇಜಸ್ (24) ಎಂಬುವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರ ನಿವಾಸಿ ತೇಜಸ್, ಗುರುವಾರ ರಾತ್ರಿ ಕೃತ್ಯ ಎಸಗಿದ್ದ. ರಸ್ತೆ ಅಕ್ಕ–ಪಕ್ಕದಲ್ಲಿ ನಿಲ್ಲಿಸಿದ್ದ ಸಾರ್ವಜನಿಕರ 12 ವಾಹನಗಳ ಗಾಜುಗಳನ್ನೂ ಒಡೆದಿದ್ದ. ಗಾಯಾಳು ಪೋಷಕರು ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ದುಶ್ಚಟ ಬಿಡಿಸಲು ಪ್ರಯತ್ನ: ‘ಆರೋಪಿ ತೇಜಸ್ ದುಶ್ಚಟಕ್ಕೆ ಬಿದ್ದಿದ್ದ. ಪೋಷಕರು ಈತನಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಅಷ್ಟಾದರೂ ಆರೋಪಿಯು ದುಶ್ಚಟ ಬಿಟ್ಟಿರಲಿಲ್ಲ. ಈತನ ಆರೋಗ್ಯವೂ ಹದಗೆಟ್ಟಿತ್ತು’ ಎಂದು ಪೊಲೀಸರು ತಿಳಿಸಿದರು.

‘ಮಗನನ್ನು ದುಶ್ಚಟಗಳಿಂದ ದೂರ ಮಾಡಲು ಪ್ರಯತ್ನಿಸಿದ್ದ ಪೋಷಕರು, ವೈದ್ಯರ ಸಲಹೆಯಂತೆ ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಮುಂದಾಗಿದ್ದರು. ಅದರಂತೆ ತಂದೆ–ತಾಯಿ ಹಾಗೂ ಸೋದರ ಮಾವ, ಆರೋಪಿ ತೇಜಸ್‌ನನ್ನು ಕೇಂದ್ರಕ್ಕೆ ಬಿಟ್ಟು ಬರಲು ತಯಾರಿ ಮಾಡಿಕೊಳ್ಳುತ್ತಿದ್ದರು’ ಎಂದೂ ಹೇಳಿದರು.

ಚಾಕುವಿನಿಂದ ಇರಿದು ಪರಾರಿ: ‘ತೇಜಸ್‌ ಜೊತೆ ಗುರುವಾರ ರಾತ್ರಿ ಮಾತುಕತೆ ನಡೆಸಿದ್ದ ತಂದೆ–ತಾಯಿ, ಪುನರ್ವಸತಿ ಕೇಂದ್ರಕ್ಕೆ ಸೇರಿಸುವುದಾಗಿ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ತೇಜಸ್, ಜಗಳ ತೆಗೆದು ರಂಪಾಟ ಮಾಡಿದ್ದ. ಚಾಕುವಿನಿಂದ ತಂದೆ–ತಾಯಿಗೆ ಇರಿದಿದ್ದ. ನಂತರ, ಸೋದರ ಮಾವನಿಗೆ ಚಾಕುವಿನಿಂದ ಚುಚ್ಚಿ ಮನೆಯಿಂದ ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

‘ರಸ್ತೆಯಲ್ಲಿ ಓಡಾಡಿದ್ದ ಆರೋಪಿ, ವಿಚಿತ್ರವಾಗಿ ವರ್ತಿಸಿದ್ದ. ಕಾರು, ಸೇರಿ 12 ವಾಹನಗಳ ಗಾಜು ಒಡೆದಿದ್ದ. ನಂತರ, ಚಾಕು ಹಿಡಿದುಕೊಂಡು ಗಣೇಶ ವಿಸರ್ಜನೆ ಮೆರವಣಿಗೆಯ ಸ್ಥಳಕ್ಕೆ ಹೋಗಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT