ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್‌ಗೆ 108 ಸಂಘಟನೆಗಳ ಬೆಂಬಲ

Last Updated 28 ಸೆಪ್ಟೆಂಬರ್ 2020, 12:22 IST
ಅಕ್ಷರ ಗಾತ್ರ

ಬೆಂಗಳೂರು: ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಸೋಮವಾರ ನಡೆಸಲಿರುವ ‘ಕರ್ನಾಟಕ ಬಂದ್‌’ಗೆ 108 ಸಂಘಟನೆಗಳು ಬೆಂಬಲ ನೀಡಿವೆ.

ಸರ್ಕಾರದ ರೈತವಿರೋಧಿ ಧೋರಣೆ ಖಂಡಿಸಿ, ಹೋರಾಟಕ್ಕೆ ಇಳಿದಿರುವಐಕ್ಯ ಹೋರಾಟ ಸಮಿತಿ ಕರೆಗೆ ಕಬಿನಿ ರೈತ ಹಿತರಕ್ಷಣಾ ಸಮಿತಿ, ರಾಜ್ಯ ಕೃಷಿ ಪಂಪ್‌ಸೆಟ್ ಬಳಕೆದಾರರ ಸಂಘ, ಮಹಾದಾಯಿ ನೀರು ಹೋರಾಟ ಸಮಿತಿ, ಓಲಾ ಮತ್ತು ಊಬರ್ ಆಟೊ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ, ಸಮುದಾಯ ಕರ್ನಾಟಕ, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಸೇರಿದಂತೆ ಸುಮಾರು 108 ಕ್ಕೂ ಅಧಿಕ ಸಂಘಟನೆಗಳು ಈಗಾಗಲೇ ಬೆಂಬಲ ಸೂಚಿಸಿವೆ.

ನಗರದಲ್ಲಿ ಭಾನುವಾರ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯ ಸದಸ್ಯರು, ಸೋಮವಾರದ ಬಂದ್‌ ಕುರಿತು ಜನರಿಗೆ ಮಾಹಿತಿ ನೀಡಿ, ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು. ಸುಗ್ರೀವಾಜ್ಞೆಗಳು ಮತ್ತು ಮಸೂದೆಗಳಿಂದ ರೈತರು ಮತ್ತು ಕಾರ್ಮಿಕರಿಗೆ ಆಗುವ ಅನನುಕೂಲದ ಕುರಿತು ವಿವರಿಸಿದರು.

ಬಂದ್ ಬೆಂಬಲಿಸುವ ಎಲ್ಲರೂ ಸೋಮವಾರ ಬೆಳಿಗ್ಗೆ 10ಕ್ಕೆ ಪುರಭವನದ ಬಳಿ ಸೇರಬೇಕು ಎಂದು ಸಮಿತಿ ಕರೆ ಕೊಟ್ಟಿದೆ. ಅಲ್ಲಿಂದ, 11.30ಕ್ಕೆ ನಗರದ ಪ್ರಮುಖ ರಸ್ತೆಗಳ ಮೂಲಕ ಮೈಸೂರು ಬ್ಯಾಂಕ್‌ ವೃತ್ತದವರೆಗೆ ಸಾಗಿ ಅಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಸಮಿತಿ ಹೇಳಿದೆ.

‘ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯು ನಿಷ್ಕ್ರಿಯವಾಗಿ, ಮಾಧ್ಯಮಗಳು ಆಳುವ ಪಕ್ಷದ ಸೇವೆ ಮಾಡುವ ಮಟ್ಟಕ್ಕೆ ಇಳಿದಿರುವ ಈ ಸಂದರ್ಭದಲ್ಲಿಜನ ಹೋರಾಟವೊಂದೇ ಜನತಂತ್ರವನ್ನು ಕಾಪಾಡಲು ಉಳಿದಿರುವ ರಾಜಮಾರ್ಗ.ರೈತ–ಕಾರ್ಮಿಕರ ಹೋರಾಟಕ್ಕೆ ನಮ್ಮ ಬೆಂಬಲ ಇದೆ' ಎಂದು ಸಮಕಾಲೀನ ಸಾಂಸ್ಕೃತಿಕ ಸಾಮಾಜಿಕ ವೇದಿಕೆಯ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್ ಹೇಳಿದ್ದಾರೆ.

‘ರೈತರ ಹೆಸರಿನಲ್ಲಿ ಗದ್ದುಗೆ ಏರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೀಗ ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ.ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.

ಆಟೊ ಮತ್ತು ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘವೂ ಸ್ವಯಂಪ್ರೇರಿತವಾಗಿ ಬಂದ್‌ನಲ್ಲಿ ಪಾಲ್ಗೊಳ್ಳಲು ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT