ಶನಿವಾರ, ಆಗಸ್ಟ್ 13, 2022
24 °C
ನಿವಾಸಿಗಳ ನಿದ್ರೆಗೆಡಿಸಿದ ಪ್ರವಾಹ

ಕಿರಿದಾಗುತ್ತಾ ಸಾಗುವ ರಾಜಕಾಲುವೆ: 'ಮಾನ್ಯತಾ' ಸುತ್ತಮುತ್ತಲ ಬಡಾವಣೆಗಳಿಗೆ ಜಲಕಂಟಕ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮನೆಯಲ್ಲಿ ರಾತ್ರಿ ಮಲಗಿ ಬೆಳಗಾಗಿ ಎದ್ದು ನೋಡುವಷ್ಟರಲ್ಲಿ ಯಾವುದೋ ಕೆರೆಯಲ್ಲಿ ಇಡೀ ಬಡಾವಣೆಯೇ ತೇಲುತ್ತಿರುವ ಅನುಭವ ಆಯಿತು. ಅಂದಿನಿಂದ ರಾತ್ರಿ ಮಲಗಿದರೂ ನಿದ್ರೆಯೇ ಬರುತ್ತಿಲ್ಲ...

ಇದು ಮಾನ್ಯತಾ ಟೆಕ್‌ಪಾರ್ಕ್ ಹಿಂಭಾಗದ ಮರಿಯಣ್ಣನಪಾಳ್ಯ ನಿವಾಸಿಗಳು ಹೇಳುವ ಮಾತು. ಕಳೆದ ವಾರ ಸುರಿದ ಮಳೆ ಸುತ್ತಮುತ್ತಲ ಬಡಾವಣೆ ನಿವಾಸಿಗಳ ನಿದ್ರೆಗೆಡಿಸಿದೆ.

ಕಳೆದ ವಾರ ದುತ್ತೆಂದು ಸುರಿದ ಮಳೆಗೆ ಕೆಲವು ಬಡಾವಣೆಗಳ ಕೆರೆ, ಕಟ್ಟೆಗಳು, ರಾಜಕಾಲುವೆಗಳೆಲ್ಲವೂ ತುಂಬಿ ಹರಿದವು. ಈ ಸಂದರ್ಭದಲ್ಲಿ ಮರಿಯಣ್ಣನಪಾಳ್ಯ ಮತ್ತು ಮಾನ್ಯತಾ ಟೆಕ್‌ಪಾರ್ಕ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತ್ತು. ಇಲ್ಲಿನ ನಿವಾಸಿಗಳಿಲ್ಲಿ ಜಲಪ್ರಳಯವೇ ಸಂಭವಿಸಿರಬಹುದು ಎಂಬ ಅನುಮಾನ ಹುಟ್ಟುವಂತೆ ಮಾಡಿತ್ತು.

ಹೆಬ್ಬಾಳಕೆರೆ, ನಾಗವಾರ ಕೆರೆಗಳು ತುಂಬಿದ ನೀರು ನಂತರದಲ್ಲಿ ಪಿನಾಕಿನಿ ಕಣಿವೆ ಕಡೆಗೆ ಹರಿಯುತ್ತದೆ. ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು, ರಾಚೇನಹಳ್ಳಿ ಕೆರೆಗಳ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆ ಮತ್ತು ಹೆಗಡೆ ನಗರ, ಶಿವರಾಮ ಕಾರಂತ ನಗರ ಕಡೆಯಿಂದ ಬರುವ ಮಗದೊಂದು ರಾಜಕಾಲುವೆ ಕೂಡ ಮಾನ್ಯತಾ ಟೆಕ್‌ಪಾರ್ಕ್‌ ಆವರಣ ಪ್ರವೇಶಿಸುವ ಮೊದಲೇ ಒಟ್ಟುಗೂಡಿ ಹರಿಯುತ್ತವೆ.

‘ಆಗ ನೀರಿನ ಪ್ರಮಾಣ ಮೂರುಪಟ್ಟು ಹೆಚ್ಚಾಗುತ್ತದೆ. ನೀರಿನ ಹರಿವಿಗೆ ತಕ್ಕಂತೆ ರಾಜಕಾಲುವೆ ದೊಡ್ಡದಾಗುತ್ತಾ ಹೋಗಬೇಕು. ಆದರೆ, ಇಲ್ಲಿ ತದ್ವಿರುದ್ಧವಾಗಿದೆ. ಲುಂಬಿನಿಗಾರ್ಡನ್‌ ಬಳಿ ದೊಡ್ಡದಾಗಿ ಕಾಣಿಸುವ ರಾಜಕಾಲುವೆ ಮಾನ್ಯತಾ ಟೆಕ್ ಪಾರ್ಕ್‌ ದಾಟಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿನ ಎಲಿಮೆಂಟ್ಸ್‌ ಮಾಲ್‌ ಬಳಿಗೆ ಹೋಗುವಷ್ಟರಲ್ಲಿ ಚಿಕ್ಕದಾಗಿದೆ. ಹೀಗಾಗಿಯೇ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಸುತ್ತಮುತ್ತಲ ಬಡಾವಣೆಗಳಿಗೆ ನುಗ್ಗುತ್ತಿದೆ’ ಎನ್ನುತ್ತಾರೆ ಸಂಜೀವ್ ದ್ಯಾಮಣ್ಣನವರ.

‘ರಾಜಕಾಲುವೆಯನ್ನು ಕಾಂಕ್ರಿಟ್ ಮಯ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ನೀರು ಇಂಗಲು ಅವಕಾಶ ಇರಬೇಕು. ಪ್ರತಿ ರಾಜಕಾಲುವೆಗೂ ಬಫರ್ ವಲಯ ಇರಬೇಕು. ರಾಜಕಾಲುವೆಯನ್ನೇ ಕಿರಿದು ಮಾಡಿದ್ದು, ಬಫರ್‌ ವಲಯವಂತೂ ಇಲ್ಲವೇ ಇಲ್ಲ. ಹೀಗಾಗಿ ಜೋರು ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದರು.

‘ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ವಹಿಸಿರುವ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಇದು ಈ ವರ್ಷ ಮಾತ್ರ ಎದುರಾಗಿರುವ ಸಮಸ್ಯೆ ಅಲ್ಲ. ಪ್ರತಿವರ್ಷವೂ ಜೋರು ಮಳೆಯಲ್ಲಿ ನೀರು ನುಗ್ಗುತ್ತಿದೆ’ ಎಂದು ಹೇಳಿದರು.‌

ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ, ‘ಮಾನ್ಯತಾ ಟೆಕ್‌ಪಾರ್ಕ್ ಆವರಣದಲ್ಲಿ ರಾಜಕಾಲುವೆಗೆ ಹಾಕಿರುವ ಮೇಲ್ಚಾವಣಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಬೇಕು’ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಗುರುವಾರದ ತನಕ ಈ ಕಾಮಗಾರಿ ಆರಂಭವಾಗಿರಲಿಲ್ಲ.

ದವಸ, ಬಟ್ಟೆ ಎಲ್ಲವೂ ನೀರುಪಾಲು

‘ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದೆವು. ಬರುವಷ್ಟರಲ್ಲಿ ಮನೆಯಲ್ಲಿದ್ದ ಅಕ್ಕಿ, ದವಸ, ಬಟ್ಟೆ, ಮಕ್ಕಳ ಪುಸ್ತಕ ಎಲ್ಲವೂ ನೀರುಪಾಲಾಗಿವೆ’ ಎಂದು ಮರಿಯಣ್ಣನಪಾಳ್ಯದಲ್ಲಿ ಮನೆಕೆಲಸ ಮಾಡುವ ಯಲ್ಲಮ್ಮ ಹೇಳಿದರು.

‘ಔಟ್‌ಹೌಸ್ ರೀತಿಯ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದೇವೆ. ಊರಿನಿಂದ ಬರುವಷ್ಟರಲ್ಲಿ ಇಡೀ ಬಡಾವಣೆಯೇ ನೀರಿನಲ್ಲಿ ತುಂಬಿ ಹೋಗಿತ್ತು. ಮನೆ ಬೀಗ ತೆಗೆದು ನೋಡಿದರೆ ಏನೇನು ಉಳಿದಿರಲಿಲ್ಲ. ಎಲ್ಲವನ್ನೂ ಎತ್ತಿ ಬಿಸಾಡಿದ್ದೇವೆ. ಈಗ ತಿನ್ನಲೂ ಗತಿಯಿಲ್ಲ’ ಎಂದು ಅವರು ಕಣ್ಣೀರು ಹಾಕಿದರು.

ಮೇಲ್ಚಾವಣಿ ತೆರವಿಗೆ ಕ್ರಮ

‘ಮಾನ್ಯತಾ ಟೆಕ್‌ಪಾರ್ಕ್‌ ಬಳಿ ರಾಜಕಾಲುವೆಗೆ ಮೇಲ್ಚಾವಣಿ ಹೊದಿಸಿರುವ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೆರವುಗೊಳಿಸುವಂತೆ ಎಂಬೆಸ್ಸಿ ಗ್ರೂಪ್‌ಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌. ಪ್ರಹ್ಲಾದ್ ತಿಳಿಸಿದರು.

‘ರಾಜಕಾಲುವೆಯ ಎರಡೂ ಬದಿ ರಸ್ತೆಗಳನ್ನು ನಿರ್ಮಿಸಿ ಸೌಂದರೀಕರಣ ಮಾಡಲಾಗಿದೆ. ಆದರೆ, ರಾಜಕಾಲುವೆ ಇರುವುದು ಈ ಉದ್ದೇಶಕ್ಕೆ ಅಲ್ಲ. ಮೇಲ್ಚಾವಣಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದೆವು. ತೆರವು ಕಾರ್ಯ ಆರಂಭ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು