ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ಹಣ್ಣು–ತರಕಾರಿ ದರ ಏರುಪೇರು

Last Updated 23 ಫೆಬ್ರುವರಿ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಅಕಾಲಿಕ ಮಳೆಯ ಪರಿಣಾಮ ನಗರದಲ್ಲಿ ತರಕಾರಿ ಮತ್ತು ಹಣ್ಣಿನ ದರಗಳಲ್ಲಿ ಏರುಪೇರು ಕಂಡುಬಂದಿದೆ.

ಭಾರಿ ಮಳೆಯಿಂದ ಕೆಲವು ತರಕಾರಿ ಬೆಳೆಗಳು ಹಾನಿಗೊಂಡಿರುವುದರಿಂದ ದರಗಳಲ್ಲಿ ತುಸು ಏರಿಳಿತ ಕಂಡು ಬಂದಿದೆ. ಕಳೆದ ಒಂದು ತಿಂಗಳಿನಿಂದ ಸ್ಥಿರವಾಗಿದ್ದ ದರಗಳು, ಶಿವರಾತ್ರಿ ವೇಳೆಗೆ ಏರಿಕೆ ದರ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಬೆಳ್ಳುಳ್ಳಿ,ಈರುಳ್ಳಿ,ಬೀಟ್‍ರೂಟ್,ಮೆಣಸಿನಕಾಯಿ,ಬೀನ್ಸ್, ಬದನೆ ಹಾಗೂ ಬೆಂಡೆಕಾಯಿ ದರಗಳು ಏರಿಕೆ ಕಂಡಿವೆ. ಟೊಮೆಟೊ, ಮೂಲಂಗಿ, ಆಲೂಗೆಡ್ಡೆ, ಶುಂಠಿ, ಹೂಕೋಸು ಸೇರಿದಂತೆ ಹಲವು ತರಕಾರಿ ದರ ₹50 ಒಳಗಿದೆ.

‘ಕಳೆದ ವಾರ ಸುರಿದ ಅಕಾಲಿಕ ಮಳೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮಳೆಯಿಂದ ಅಲ್ಪಸ್ವಲ್ಪ ಬೆಳೆಗಳು ಹಾನಿಗೆ ಒಳಗಾಗಿರಬಹುದು. ಇದರಿಂದ ಮಾರುಕಟ್ಟೆಗಳಿಗೆ ತರಕಾರಿ ಆವಕ ಸ್ವಲ್ಪ ಕಡಿಮೆಯಾಗಿತ್ತು. ಈಗ ಮಾರುಕಟ್ಟೆಯಲ್ಲಿ ಎಂದಿನಂತೆ ಅಗತ್ಯ ಪ್ರಮಾಣದ ತರಕಾರಿ ಪೂರೈಕೆಯಾಗುತ್ತಿದೆ’ ಎಂದು ದಾಸನಪುರ ಎಪಿಎಂಸಿ ಪ್ರಾಂಗಣದ ತರಕಾರಿ ಮತ್ತು ಸೊಪ್ಪಿನ ವರ್ತಕ ಕುಮಾರ್ ತಿಳಿಸಿದರು.

‘ರಾಜ್ಯದಲ್ಲಿ ಕೆಲವೆಡೆ ಮಾತ್ರ ಭಾರಿ ಮಳೆಯಾಗಿದೆ. ಇನ್ನುಳಿದ ಭಾಗದಲ್ಲಿ ಸಾಮಾನ್ಯ ಹಾಗೂ ತುಂತುರು ಮಳೆ ಬಂದಿದ್ದರಿಂದ ಬತ್ತಿದ್ದ ಬೆಳೆಗಳಿಗೂ ಜೀವ ಬಂದಿದೆ. ಶಿವರಾತ್ರಿಗೆ ಉಪವಾಸ ವ್ರತ ಇರುವುದರಿಂದಲೂ ಹಬ್ಬದ ವೇಳೆ ಅಷ್ಟೇನೂ ತರಕಾರಿ ದರಗಳು ಏರುವುದು ಅನುಮಾನ. ಆದರೆ, ಮುಂದಿನ ಒಂದು ತಿಂಗಳವರೆಗೆ ತರಕಾರಿ ದರಗಳಲ್ಲಿ ಸ್ಥಿರತೆ ಕಾಣಬಹುದು’ ಎಂದರು.

‘ಶಿವರಾತ್ರಿ ಬಳಿಕ ಬೇಸಿಗೆ ಶುರುವಾಗಲಿದ್ದು, ಆಗ ಸೊಪ್ಪು ಹಾಗೂ ತರಕಾರಿಗಳು ತಾಪಕ್ಕೆ ತಡೆಯುವುದಿಲ್ಲ. ಈ ವೇಳೆ ಸೊಪ್ಪು ಮತ್ತು ಕೆಲ ತರಕಾರಿಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ’ ಎಂದೂ ಹೇಳಿದರು.

ಸೊಪ್ಪಿನ ದರಗಳು ಸ್ಥಿರ: ‘ಒಂದು ತಿಂಗಳಿನಿಂದ ಸೊಪ್ಪಿನ ದರಗಳು ವ್ಯತ್ಯಾಸ ಕಂಡಿಲ್ಲ. ಕೊತ್ತಂಬರಿ ಹಾಗೂ ಸಬ್ಬಸ್ಸಿಗೆಸೊಪ್ಪಿಗೆ ಬೇಡಿಕೆ ಇರುವುದರಿಂದ ದರ ಸ್ವಲ್ಪ ಹೆಚ್ಚಿದೆ. ಪಾಲಕ್, ಮೆಂತ್ಯೆ, ದಂಟಿನ ಸೊಪ್ಪು ಸೇರಿದಂತೆ ಉಳಿದ ಸೊಪ್ಪಿನ ದರಗಳು ಪ್ರತಿ ಕಟ್ಟಿಗೆ ₹10ರ ಒಳಗಿದೆ’ ಎಂದು ಸೊಪ್ಪಿನ ವ್ಯಾಪಾರಿ ಮೋಹನ್ ತಿಳಿಸಿದರು.

ಹಣ್ಣಿನ ದರ ಏರಿಕೆ ಸಾಧ್ಯತೆ: ‘ಬೇಸಿಗೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಸದ್ಯ ಈಗಿನ ಹಣ್ಣುಗಳ ಪೈಕಿ ಸೇಬು, ದ್ರಾಕ್ಷಿ, ಸಪೋಟ, ಕಿತ್ತಳೆ, ಮೂಸಂಬಿ ದರಗಳು ಪ್ರತಿ ಕೆ.ಜಿ.ಗೆ ₹50ಕ್ಕಿಂತ ಹೆಚ್ಚೇ ಇದೆ. ಬೇಸಿಗೆಯಲ್ಲಿ ಹಣ್ಣುಗಳ ಸೇವನೆ ಹಾಗೂ ಪಾನೀಯ ಸೇವಿಸುವುದು ಹೆಚ್ಚು. ಬೇಸಿಗೆಗೂ ಮುನ್ನವೇ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ, ಪಪ್ಪಾಯ ರಾಶಿ ಬಿದ್ದಿವೆ. ಸದ್ಯಕ್ಕೆ ಈ ಎರಡೂ ಹಣ್ಣಿನ ದರ ಕಡಿಮೆ ಇದ್ದು, ಒಂದು ತಿಂಗಳಿನಲ್ಲಿ ಹಣ್ಣಿನ ದರಗಳೆಲ್ಲ ಏರಲಿವೆ’ ಎಂದು ಹಣ್ಣಿನ ವ್ಯಾಪಾರಿ ಫಯಾಜ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT