ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆಗಾಗಿ ಅಂಕಪಟ್ಟಿ ತಿದ್ದಿದರು!: ಯುವತಿಯರು ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

Last Updated 18 ಮಾರ್ಚ್ 2019, 5:43 IST
ಅಕ್ಷರ ಗಾತ್ರ

ಬೆಂಗಳೂರು: ಕೋರ್ಟ್‌ನಲ್ಲಿ ಜವಾನ ಹುದ್ದೆ ಗಿಟ್ಟಿಸಿಕೊಳ್ಳಲು 7ನೇ ತರಗತಿಯಅಂಕಗಳನ್ನು ತಿದ್ದಿದ್ದ ಇಬ್ಬರು ಯುವತಿಯರೂ ಸೇರಿದಂತೆ ನಾಲ್ವರ ನೆತ್ತಿ ಮೇಲೆ ಶಿಸ್ತು ಕ್ರಮದ ಕತ್ತಿ ತೂಗುತ್ತಿದೆ.

ಮಂಡ್ಯದ ಸಿ.ಚೇತನಾ, ವಿಜಯಪುರದ ಭಾರತಿ ತುಕಾರಾಂ ಖಂಡೇಕಾರ, ಸುನೀಲ್ ಗೌಡ ಹನುಮಂತ ಪಾಟೀಲ ಹಾಗೂ ಕಲಬುರ್ಗಿಯ ಸುಭಾಷ್ ಶಿವಶರಣಪ್ಪ ರೇವೂರ ಎಂಬುವರ ವಿರುದ್ಧ ಬೆಂಗಳೂರು ಜಿಲ್ಲಾ ನ್ಯಾಯಾಲಯದ ಆಡಳಿತ ವಿಭಾಗದ ಎಂ.ರಾಮಚಂದ್ರ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಏನಿದು ಪ್ರಕರಣ: ನ್ಯಾಯಾಲಯದಲ್ಲಿ ಖಾಲಿ ಇದ್ದ 50 ಜವಾನ ಹುದ್ದೆಗಳಿಗೆ 2017ರ ಸೆ‍.14ರಂದು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ವಿದ್ಯಾರ್ಹತೆ ಅಂಕಣದಲ್ಲಿ 7ನೇ ತರಗತಿಯ ಅಂಕಗಳನ್ನು ತುಂಬಿದ್ದರು. ಆ
ಅಂಕಗಳ ಆಧಾರದ ಮೇಲೆ 1:10 ಅನುಪಾತದಂತೆ ಅವರನ್ನು 2018ರ ಆಗಸ್ಟ್‌ನಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು.

ಭಾರತಿ, ಸುನೀಲ್ ಹಾಗೂ ಸುಭಾಷ್ ಅವರು ಸಂದರ್ಶನದ ವೇಳೆ ನೀಡಿದ ಮೂಲ ದಾಖಲೆಗಳಿಗೂ, ಅವರು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದ ದಾಖಲೆಗಳಿಗೂ ಹೋಲಿಕೆ ಕಂಡು ಬಂದಿರಲಿಲ್ಲ. ಹೀಗಾಗಿ, ನೈಜತೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಆ ದಾಖಲೆಗಳನ್ನು ಕಳುಹಿಸಲಾಗಿತ್ತು. ಅವುಗಳನ್ನು ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲೆಗಳ ಮುಖ್ಯ ಶಿಕ್ಷಕರು, ‘ಅಭ್ಯರ್ಥಿಗಳು ಅಂಕಗಳನ್ನು ತಿದ್ದಿದ್ದಾರೆ. ದಾಖಲೆಗಳು ನೈಜತೆಯಿಂದ ಕೂಡಿಲ್ಲ’ ಎಂದು ಇತ್ತೀಚೆಗೆ ವರದಿ ಕೊಟ್ಟಿದ್ದಾರೆ.

ಕೆಲಸವೂ ದಕ್ಕಿತ್ತು: ಆದರೆ, ಇನ್ನೊಬ್ಬ ಆರೋಪಿ ಸಿ.ಚೇತನಾ ಅವರು ಸಂದರ್ಶನದ ವೇಳೆ ಕೊಟ್ಟಿದ್ದ ಅಂಕಪಟ್ಟಿಗೂ, ಅವರು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ್ದ ಅಂಕಗಳಿಗೂ ತಾಳೆಯಾಗಿತ್ತು. ಅದನ್ನು ನಂಬಿ ‘ಪರಿಶಿಷ್ಟ ಜಾತಿ+ಮಹಿಳಾ’ ವರ್ಗದಡಿ ಅವರ ಆಯ್ಕೆಯೂ ನಡೆದು ಹೋಗಿತ್ತು.

ಈ ನಡುವೆ ನೇಮಕಾತಿ ಪ್ರಾಧಿಕಾರವು ಎಲ್ಲ ಅಭ್ಯರ್ಥಿಗಳ ಜಾತಿ ಸಿಂಧುತ್ವ, ಶೈಕ್ಷಣಿಕ ದಾಖಲೆ, ಪೊಲೀಸ್ ವೆರಿಫಿಕೇಷನ್ ದಾಖಲೆಗಳನ್ನು ಅಂತಿಮ ಪರಿಶೀಲನೆಗಾಗಿ ಶಿಕ್ಷಣ ಇಲಾಖೆಗೆ ಕಳುಹಿಸಿತ್ತು. ಅಂತೆಯೇ ಚೇತನಾ ಅವರ ದಾಖಲೆಗಳು ಮಂಡ್ಯ ಅಧಿಕಾರಿಗಳ ಕೈಸೇರಿದ್ದವು. ಆಗಲೇ ಅವರ ಅಕ್ರಮವೂ ಬಯಲಾಗಿದೆ.

‘ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆಯಲು ಒಳಸಂಚು ನಡೆಸಿದ್ದಾರೆ. ಅರ್ಹ ಶಿಕ್ಷಕರಿಗೆ ಅನ್ಯಾಯ ಮಾಡಿರುವ ಹಾಗೂ ನೇಮಕಾತಿ ಪ್ರಾಧಿಕಾರದ ನಂಬಿಕೆಗೆ ದ್ರೋಹ ಬಗೆದ ಈ ನಾಲ್ವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ರಾಮಚಂದ್ರ ದೂರಿನಲ್ಲಿ ಮನವಿ ಮಾಡಿದ್ದಾರೆ.

20 ರಿಂದ 30 ಅಂಕ ಹೆಚ್ಚಳ

‘ಸಾಮಾನ್ಯವಾಗಿ ಹೆಚ್ಚು ಅಂಕಗಳನ್ನು ಪಡೆದ ಮೊದಲ 50 ಅಭ್ಯರ್ಥಿಗಳನ್ನು ಜವಾನ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಈ ವಿಷಯ ತಿಳಿದಿದ್ದ ಆರೋಪಿಗಳು, ಅಂಕಪಟ್ಟಿ ತಿದ್ದಿ 20 ರಿಂದ 30 ಅಂಕಗಳನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ವಂಚನೆ (ಐಪಿಸಿ 420), ದಾಖಲೆ ತಿದ್ದಿದ (ಐಪಿಸಿ 465, 467) ಹಾಗೂ ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸಿದ (471) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಗೆ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದೇವೆ’ ಎಂದು ಹಲಸೂರು ಗೇಟ್ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT