ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಗೊತ್ತಿಲ್ಲದವರ ಸಮೀಕ್ಷೆ ನಡೆಸಲಿ: ಹಂಸಲೇಖ

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಂಸಲೇಖ
Published 17 ನವೆಂಬರ್ 2023, 20:24 IST
Last Updated 17 ನವೆಂಬರ್ 2023, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದವರನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ವೇಮಗಲ್‌ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡದ ಬುನಾದಿ ಮೊದಲು ಬೆಂಗಳೂರಿನಲ್ಲಿ ಗಟ್ಟಿಯಾಗಬೇಕು. ಕನ್ನಡವನ್ನು ಅಸಡ್ಡೆ ಮಾಡುವ, ನಿರ್ಲಕ್ಷ್ಯ ಮಾಡುವ ಸರ್ಕಾರಗಳು ಹೋಗಿ ಈಗ ಕನ್ನಡವನ್ನು ಬೆಳೆಸುವ ಸರ್ಕಾರ ಬಂದಿದೆ. ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿ ಕನ್ನಡ ಗೊತ್ತಿಲ್ಲದವರನ್ನು ಗುರುತಿಸಬೇಕು. ಅದೇ ರೀತಿ ಕನ್ನಡ ತಾಯಂದಿರು ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಕಲಿಸತೊಡಗಿದ್ದಾರೆ. ಅವರ ಮಕ್ಕಳಿಗೂ ಕನ್ನಡ ಕೂಡ ಕಲಿಸುವಂತೆ ಮಾಡಬೇಕು’ ಎಂದರು.

ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಕನ್ನಡ ಭಾಷೆ ಬಾರದವರಿಗೆ, ಅರ್ಧ ಬರುವವರಿಗೆ 30 ದಿನಗಳಲ್ಲಿ ಕನ್ನಡ ಕಲಿಸುವ ಕೆಲಸವಾಗಬೇಕು. ಅದು ಮೌಖಿಕವಾಗಿಯಾದರೂ ಸರಿ’ ಎಂದು ಹಂಸಲೇಖ ತಿಳಿಸಿದರು.

ಹಿಂದುಸ್ತಾನಿ ಗಾಯಕ ಮುದ್ದುಮೋಹನ್, ಸಾಹಿತಿ ಜಿ. ಕೃಷ್ಣಪ್ಪ, ಸಂಗೀತ ವಿದ್ವಾಂಸರಾದ ಎಚ್.ಆರ್. ಲೀಲಾವತಿ, ಹಿರಿಯ ಜಾನಪದ ತಜ್ಞ ಗೊ.ರು. ಚನ್ನಬಸಪ್ಪ, ಲೇಖಕಿ ಕಮಲಾ ಹಂಪನಾ ಮತ್ತು ಕಥೆಗಾರ ಕರಿಗೌಡ ಬೀಚನಹಳ್ಳಿ ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ತಿಮ್ಮೇಶ್, ಲಲಿತಾ ಬಿ.ಕೆ., ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಆನಂದ ಮಾದಲಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT