ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೀಟು ವಂಚನೆ ಜಾಲ: ನಾಲ್ವರನ್ನು ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು

Published 6 ಅಕ್ಟೋಬರ್ 2023, 23:34 IST
Last Updated 6 ಅಕ್ಟೋಬರ್ 2023, 23:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಇತರೆ ವೈದ್ಯಕೀಯ ಕೋರ್ಸ್‌ ಕಲಿಕೆಗೆ ಸೀಟು ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ ಜಾಲವನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಆಶೀಷ್ ಆನಂದ್, ನಿಖಿಲ್‌ ಕುಮಾರ್, ಅಶುತೋಷ್ ಹಾಗೂ ಬಸಂತ್‌ಕುಮಾರ್ ಬಂಧಿತರು. ಪ್ರಮುಖ ಆರೋಪಿಯಾಗಿರುವ ಮಧ್ಯಪ್ರದೇಶದ ಮಾನವ್ ಗುಪ್ತಾ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಎಜುಟೆನ್ಸಿ ಕನ್ಸ್‌ಲ್ಟೆನ್ಸಿ ಸರ್ವೀಸ್ ಹೆಸರಿನಲ್ಲಿ ಕಂಪನಿ ಸ್ಥಾಪಿಸಿದ್ದ ಮಾನವ್ ಗುಪ್ತಾ, ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಕಚೇರಿ ತೆರೆದಿದ್ದ. ಪರಿಚಯಸ್ಥರು ಹಾಗೂ ಸ್ಥಳೀಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ. ಅವರ ಮೂಲಕವೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಣ ಪಡೆದು ವಂಚಿಸುತ್ತಿದ್ದ’ ಎಂದು ತಿಳಿಸಿವೆ.

‘ದಾವಣಗೆರೆಯಲ್ಲಿರುವ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು, ವಿದ್ಯಾರ್ಥಿಯೊಬ್ಬರ ಪೋಷಕರಿಂದ ₹ 10.80 ಲಕ್ಷ ಪಡೆದಿದ್ದರು. ನಿಗದಿತ ಸಮಯಕ್ಕೆ ಸೀಟು ಕೊಡಿಸಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ನೊಂದ ಪೋಷಕರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿಯನ್ನು ಸೆರೆ ಹಿಡಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಕಂಪನಿಯ ಕಚೇರಿಗೆ ಬೀಗ: ‘ಎಜುಟೆನ್ಸಿ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ ಕಚೇರಿಯಲ್ಲಿ ಶೋಧ ನಡೆಸಲಾಗಿದೆ. ಬ್ಯಾಂಕ್ ಖಾತೆಗಳ ದಾಖಲೆಗಳು, ಕಂಪ್ಯೂಟರ್, ಮೊಬೈಲ್ ಸೇರಿದಂತೆ ಹಲವು ದಾಖಲೆಗಳನ್ನು ಸುಪರ್ದಿಗೆ ಪಡೆಯಲಾಗಿದೆ. ಕಚೇರಿಗೆ ಬೀಗ ಹಾಕಿ, ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ನೀಟ್ ಬರೆದವರು ಗುರಿ: ‘ನೀಟ್ ಬರೆಯುತ್ತಿದ್ದ ವಿದ್ಯಾರ್ಥಿಗಳ ವಿವರವನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು. ನಂತರ, ಎಲ್ಲ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮೊಬೈಲ್‌ ಫೋನ್‌ಗಳಿಗೆ ಸಾಮೂಹಿಕ ಸಂದೇಶ ಕಳುಹಿಸುತ್ತಿದ್ದರು. ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಎಂಬಿಬಿಎಸ್ ಸೀಟುಗಳ ಪ್ರವೇಶಾತಿಗೆ ನೋಂದಣಿ ಮಾಡುತ್ತಿದೆ. ಕೇವಲ ₹ 75 ಲಕ್ಷಕ್ಕೆ? ಕರೆ ಮಾಡಿ. 90******36’ ಎಂಬುದಾಗಿ ಸಂದೇಶದಲ್ಲಿ ಬರೆಯುತ್ತಿದ್ದರು. ಅದು ನಿಜವೆಂದು ನಂಬಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಚೇರಿಗೆ ಕರೆಸಿಕೊಳ್ಳುತ್ತಿದ್ದ ಆರೋಪಿಗಳು, ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಎಂಬುದಾಗಿ ಹೇಳಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಸುತ್ತಿದ್ದರು. ವೈದ್ಯಕೀಯ ಸೀಟು ಕೊಡಿಸಲು ಕಮಿಷನ್ ನೀಡಬೇಕೆಂದು ಹೇಳಿ ಹಂತ ಹಂತವಾಗಿ ₹ 5 ಲಕ್ಷದಿಂದ ₹ 10 ಲಕ್ಷದವರೆಗೂ ಹಣ ಪಡೆಯುತ್ತಿದ್ದರು. ಇದಾದ ನಂತರ, ಯಾವುದೇ ಸೀಟು ಕೊಡಿಸುತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ವಂಚನೆ ಉದ್ದೇಶದಿಂದಲೇ ಆರೋಪಿಗಳು ಕಚೇರಿ ತೆರೆದಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಹುತೇಕರು, ನಗರ ತೊರೆದಿದ್ದಾರೆ. ಸದ್ಯ ಒಬ್ಬ ವಿದ್ಯಾರ್ಥಿ ಪೋಷಕರು ಮಾತ್ರ ದೂರು ನೀಡಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ವಂಚನೆಗೀಡಾಗಿರುವ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT