ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ಯಾರೇಜ್‌ವೊಂದರಲ್ಲಿ ರಿಪೇರಿ ಮಾಡುತ್ತಿದ್ದ ವೇಳೆ ಬಸ್ ಚಲಿಸಿದ ಪರಿಣಾಮ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರ್ತೂರು ನಿವಾಸಿ ವಿಜಯ್ (35) ಮೃತ ಮೆಕ್ಯಾನಿಕ್. ಮತ್ತೊಬ್ಬ ಯುವಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಶಾಲೆಯೊಂದರ ಬಸ್ ಕೆಟ್ಟಿತ್ತು. ಬಸ್ ಅನ್ನು ರಿಪೇರಿಗಾಗಿ ಗ್ಯಾರೇಜ್‌ಗೆ ಬಿಡಲಾಗಿತ್ತು. ಮಂಗಳವಾರ ಸಂಜೆ ವಿಜಯ್ ಮತ್ತು ಅವರ ಸಹಾಯಕ ರಿಪೇರಿ ಮಾಡುತ್ತಿದ್ದರು. ಬಸ್ ಕೆಳಭಾಗ ದಲ್ಲಿ ವಿಜಯ್ ರಿಪೇರಿ ಮಾಡುತ್ತಿದ್ದರು. ಈ ವೇಳೆ ತನ್ನ ಸಹಾಯಕನಿಗೆ ಬಸ್ ಸ್ಟಾರ್ಟ್ ಮಾಡುವಂತೆ ಸೂಚಿಸಿದ್ದರು. ಬಸ್ ಸ್ಟಾರ್ಟ್ ಮಾಡುತ್ತಿದ್ದಂತೆಯೇ ಏಕಾಏಕಿ ಚಲಿಸಿದ್ದರಿಂದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ಬಸ್‌ನಲ್ಲಿ ಮೊಬೈಲ್ ಕಳ್ಳತನ: ಸೆರೆ
ಬೆಂಗಳೂರು: ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್‌ಹಳ್ಳಿಯ ಚೇತನ್ ಬಂಧಿತ.
ಆರೋಪಿಯಿಂದ ₹2 ಲಕ್ಷ ಮೌಲ್ಯದ ಎಂಟು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಟಿಕೆಟ್ ಪಡೆದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ, ಬಸ್‌ನಲ್ಲಿ ನಿದ್ರಿಸುವ ಪ್ರಯಾಣಿಕರನ್ನೇ ಗುರಿಯಾಗಿಸಿ ಮೊಬೈಲ್ ಕಳವು ಮಾಡುತ್ತಿದ್ದ. ಈ ರೀತಿ ಕಳ್ಳತವನ್ನೇ ಹವ್ಯಾಸ ಮಾಡಿಕೊಂಡಿದ್ದ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಆರೋಪಿ ಬಂಧಿಸಲಾಯಿತು. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.