ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ

Last Updated 12 ಡಿಸೆಂಬರ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಕಿಮ್ಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ₹ 16.50 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ.

ಈ ಸಂಬಂಧ ನಾಗರಬಾವಿ ನಿವಾಸಿ ಶಿವರಾಮ್ ಶಾಸ್ತ್ರಿ (60) ಎಂಬವರು ನೀಡಿದ ದೂರಿನ ಮೇರೆಗೆ ಜಾಲಹಳ್ಳಿ ಠಾಣೆಯಲ್ಲಿ, ಆರೋಪಿಗಳಾದ ಇಗ್ನೇಷಿಯಸ್ ಫ್ರಾನ್ಸಿಸ್ ಮತ್ತು ಶರೀನ್ ಥಾಮಸ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಶಿವರಾಮ್ ಅವರ ಮಗಳು ವೈದ್ಯಕೀಯ ಕೋರ್ಸ್‌ಗೆ ಸೇರಲು ‘ನೀಟ್’ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದ ಕಾರಣ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಹೀಗಾಗಿ, ಮಗಳಿಗೆ ಮ್ಯಾನೇಜ್‌ಮೆಂಟ್ ಸೀಟು ಕೊಡಿಸಲು ಶಿವರಾಮ್ ಪ್ರಯತ್ನಿಸುತ್ತಿದ್ದರು. ಈ ಮಧ್ಯೆ, ವಿಷಯ ತಿಳಿದ ಮಹಿಳೆಯೊಬ್ಬರು ಶಿವರಾಮ್ ಅವರಿಗೆ ಪ್ರಿಯಾ ಎಂಬ ಹೆಸರಿನಲ್ಲಿ ಜು. 22ರಂದು ಕರೆ ಮಾಡಿ, ‘ಕಿಮ್ಸ್ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾ ಅಡಿ ಸೀಟು ಕೊಡಿಸುತ್ತೇವೆ. ಕೋರ್ಸ್‌ಗೆ ಒಟ್ಟು ₹ 65 ಲಕ್ಷ ಶುಲ್ಕ ಆಗಲಿದೆ. ಮೊದಲ ವರ್ಷ ₹ 15 ಲಕ್ಷ ನೀಡಬೇಕು. ಬಾಕಿ ₹ 50 ಲಕ್ಷ ಹಣವನ್ನು ತಲಾ ₹ 12.50 ಲಕ್ಷದಂತೆ ನಾಲ್ಕು ವರ್ಷ ಪಾವತಿಸಬೇಕು. ಸೀಟು ಕೊಡಿಸುವ ನಮಗೆ ಮೂರು ಲಕ್ಷ ಕಮಿಷನ್ ನೀಡಬೇಕು’ ಎಂದಿದ್ದರು. ಕ್ರೆಸೆಂಟ್ ರಸ್ತೆಯಲ್ಲಿ ಟ್ರೈಮೆಟ್ ಇಂಡಿಯಾ ಕನ್ಸಲ್ಟಿಂಗ್ ಏಜೆನ್ಸಿ ಇದೆ. ಕಚೇರಿಗೆ ಬಂದು ಮ್ಯಾನೇಜರ್ ಇಗ್ನೇಷಿಯಸ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವಂತೆ ತಿಳಿಸಿದ್ದರು.

ಪತ್ನಿ ಮತ್ತು ಭಾಮೈದನ ಜತೆ ಏಜೆನ್ಸಿಯ ಕಚೇರಿಗೆ ತೆರಳಿ, ಇಗ್ನೇಷಿಯಸ್‌ನನ್ನು ಶಿವರಾಮ್ ಭೇಟಿ ಮಾಡಿದ್ದರು. ಆಗಸ್ಟ್ ತಿಂಗಳ ಅಂತ್ಯದಲ್ಲಿ ಸೀಟು ಸಿಗಲಿದ್ದು, ₹ 15 ಲಕ್ಷ ಮತ್ತು ₹ 1 ಲಕ್ಷ ಮೊತ್ತ ಡಿ.ಡಿ ನೀಡುವಂತೆ ಕೇಳಿದ್ದರು. ಅಲ್ಲದೆ, ಮನೆ ಬಳಿ ವ್ಯಕ್ತಿಯೊಬ್ಬರನ್ನು ಕಳುಹಿಸಿ ಹಣ ಕೊಡಿ’ ಎಂದಿದ್ದರು.

ಆರೋಪಿಗಳಿಗೆ ಶಿವರಾಮ್, ಮೂರು ಕಂತುಗಳಲ್ಲಿ ₹ 16.50 ಲಕ್ಷ ನೀಡಿದ್ದಾರೆ. ಹಣ ಪಡೆದ ಬಳಿಕ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕಚೇರಿ ಬಾಗಿಲು ಮುಚ್ಚಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT