ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ನಲ್ಲಿ ಸೀಟು ಕೊಡಿಸುವುದಾಗಿ ₹ 15 ಲಕ್ಷ ವಂಚನೆ

Last Updated 12 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್‌) ಎಂಬಿಬಿಎಸ್‌ ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಯೊಬ್ಬನ ಪೋಷಕರಿಂದ ₹ 15 ಲಕ್ಷ ಪಡೆದುಕೊಂಡು ವಂಚಿಸಲಾಗಿದ್ದು, ಆ ಸಂಬಂಧ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನ್ನ ಮಗನಿಗೆ ಸೀಟು ಕೊಡಿಸುವುದಾಗಿ ಹೇಳಿ ಕೊಲ್ಹಾಪುರದ ಅಶೋಕ ಕಾಂಬ್ಳೆ, ಬೆಂಗಳೂರಿನ ಶಾಹಿ ಅಬ್ರಾರ್, ಇಬ್ರಾಹಿಂ ಪಾಷಾ ಹಾಗೂ ಶಾಲಿನ್ ಗೌರವ್‌ ಎಂಬುವರು ಹಣ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಹುಬ್ಬಳ್ಳಿಯ ಪ್ರಶಾಂತ್ ಶೆಟ್ಟಿ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ದೂರಿನ ವಿವರ: ‘ನನ್ನ ಮಗ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣನಾಗಿದ್ದು, 2018ರ ನೀಟ್‌ನಲ್ಲಿ ಉತ್ತಮ ರ‍್ಯಾಂಕ್‌ ಪಡೆಯದಿದ್ದರಿಂದ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ. ಅದೇ ವೇಳೆ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ಕಿಮ್ಸ್‌ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟುಗಳು ಖಾಲಿ ಇವೆ. ₹ 60 ಲಕ್ಷ ಕೊಟ್ಟರೆ ಕೊಡಿಸುತ್ತೇವೆ’ ಎಂಬುದಾಗಿ ಆಮಿಷವೊಡ್ಡಿದ್ದರು’ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.

‘ಆರೋಪಿಗಳ ಮಾತು ನಂಬಿ, ಹಣ ಕೊಡಲು ಒಪ್ಪಿಕೊಂಡಿದ್ದೆ. ‘₹ 10 ಲಕ್ಷ ನಗದು ಸಮೇತ ಕಾಲೇಜಿಗೆ ಬನ್ನಿ’ ಎಂದು ಆರೋಪಿಗಳು ಹೇಳಿದ್ದರು. 2018ರ ಆಗಸ್ಟ್ 7ರಂದು ಮಗನ ಜೊತೆ ಕಾಲೇಜಿಗೆ ಹೋಗಿದ್ದೆ. ನಮ್ಮನ್ನು ಬರಮಾಡಿಕೊಂಡಿದ್ದ ಆರೋಪಿ ಅಶೋಕ ಕಾಂಬ್ಳೆ, ಇನ್ನೊಬ್ಬ ಆರೋಪಿ ಶಾಹಿ ಅಬ್ರಾರ್‌ನನ್ನೇ ಕಿಮ್ಸ್‌ ಅಧ್ಯಕ್ಷನೆಂದು ಪರಿಚಯ ಮಾಡಿಸಿದ್ದ. ಅವರ ಜೊತೆ ಇತರ ಆರೋಪಿಗಳೂ ಇದ್ದರು. ಅವರೇ ಡಿ.ಡಿ ಹಾಗೂ ಹಣವನ್ನು ಪಡೆದುಕೊಂಡು ವಾಪಸು ಕಳುಹಿಸಿದ್ದರು.’

‘ಕೆಲ ದಿನ ಬಿಟ್ಟು ಕರೆ ಮಾಡಿದ್ದ ಅಶೋಕ ಕಾಂಬ್ಳೆ, ‘ನಿಮ್ಮ ಮಗನ ಸೀಟು ಖಾತ್ರಿಯಾಗಿದೆ. ಇನ್ನೊಂದು ₹ 5 ಲಕ್ಷ ಕೊಡಿ’ ಎಂದಿದ್ದರು. ಆತ ಹೇಳಿದ್ದ ಬ್ಯಾಂಕ್ ಖಾತೆಗೆ ಹಣ ಹಾಕಿದ್ದೆ. ಅದಾದ ನಂತರ ಆರೋಪಿಗಳು, ಯಾವುದೇ ಸೀಟು ಕೊಡಿಸಿಲ್ಲ. ಹಣವನ್ನೂ ವಾಪಸ್ ಕೊಡುತ್ತಿಲ್ಲ’ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT