ಗುರುವಾರ , ಫೆಬ್ರವರಿ 27, 2020
19 °C
150 ವರ್ಷ ಪ್ರಾಚೀನ ಆಂಜನೇಯ ದೇವಸ್ಥಾನ l ಸ್ಥಳೀಯರ ಆಕ್ರೋಶ

ಮೆಟ್ರೊ ಕಾಮಗಾರಿ ದೇಗುಲ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇಹಂತದ ಯೋಜನೆಯಡಿ ಆರ್‌.ವಿ. ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೊ ರೈಲುಮಾರ್ಗ ನಿರ್ಮಾಣಕ್ಕಾಗಿ ಆಂಜನೇಯ ಸ್ವಾಮಿ ದೇಗುಲವನ್ನು ಸೋಮವಾರ ನೆಲಸಮಗೊಳಿಸಲಾಯಿತು. ಗಾರ್ವೆಬಾವಿ ಪಾಳ್ಯದಲ್ಲಿರುವ ಈ ದೇವಸ್ಥಾನ 150 ವರ್ಷಗಳ ಇತಿಹಾಸ ಹೊಂದಿದೆ. 

ಯಾವುದೇ ಸೂಚನೆ ನೀಡದೆ ಏಕಾಏಕಿ ದೇವಸ್ಥಾನ ಒಡೆದು ಹಾಕಲಾಗಿದೆ ಎಂದು ಆರೋಪಿಸಿದ ಸ್ಥಳೀಯರು ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಿದರು. ನಂತರ ಪೊಲೀಸರ ನೆರವಿನಿಂದ ಕಾರ್ಯಾಚರಣೆ ಮುಂದುವರಿಸಲಾಯಿತು.

ಸಿಲ್ಕ್‌ ಬೋರ್ಡ್‌ನಿಂದ ಹೊಸೂರು ರಸ್ತೆ ಮೂಲಕ ಬೊಮ್ಮಸಂದ್ರದವರೆಗೆ ಈ ಮೆಟ್ರೊ ಮಾರ್ಗ ನಿರ್ಮಾಣವಾಗುತ್ತಿದೆ. ಮೆಟ್ರೊ ಮಾರ್ಗದ ಪಕ್ಕ ಸರ್ವಿಸ್‌ ರಸ್ತೆ ನಿರ್ಮಿಸಬೇಕಾಗಿರುವುದರಿಂದ ಈ ದೇಗುಲವನ್ನು ನೆಲಸಮಗೊಳಿಸಲಾಗಿದೆ. 

ಈ ಮಾರ್ಗದಲ್ಲಿರುವ ಗಾರ್ವೆಬಾವಿ ಪಾಳ್ಯ, ಬೊಮ್ಮನಹಳ್ಳಿ ಹಾಗೂ ರೂಪೇನ ಅಗ್ರಹಾರದಲ್ಲಿ ಆಂಜನೇಯನ ಮೂರು ದೇವಸ್ಥಾನಗಳಿವೆ. ಈ ಪೈಕಿ, 
ಬೊಮ್ಮನಹಳ್ಳಿಯ ಕಂಬದ ಆಂಜನೇಯ ದೇವಸ್ಥಾನ ತೆರವುಗೊಳಿಸುವಲ್ಲಿ ಬಿಎಂಆರ್‌ಸಿಎಲ್‌ ಯಶಸ್ವಿಯಾಗಿದೆ.

ಸತತ ಪ್ರತಿಭಟನೆ: ದೇಗುಲವಿರುವ ಪ್ರದೇಶವನ್ನು ಸ್ವಾಧೀನಪಡಿಸಿ ಕೊಳ್ಳುವುದರ ವಿರುದ್ಧ ಗಾರ್ವೆಬಾವಿ ಪಾಳ್ಯದ ನಿವಾಸಿಗಳು ಹಾಗೂ ಆಂಜನೇಯನ ಭಕ್ತರು ಸತತವಾಗಿ ಪ್ರತಿಭಟನೆ ನಡೆಸಿದ್ದರು. ಯಾವುದೇ ಕಾರಣಕ್ಕೂ ದೇಗುಲವನ್ನು ಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ಪಟ್ಟು ಹಿಡಿದಿದ್ದರೆ, ಮೆಟ್ರೊ ಮಾರ್ಗ ನಿರ್ಮಾಣವಾಗಲು ಮತ್ತು ಮಾರ್ಗದ ಪಕ್ಕ ಸರ್ವಿಸ್‌ ರಸ್ತೆ ನಿರ್ಮಿಸಲು ಈ ದೇಗುಲ ಸ್ವಾಧೀನ ಅನಿವಾರ್ಯ ಎಂದು ನಿಗಮ ಪ್ರತಿಪಾದಿಸುತ್ತಾ ಬಂದಿತ್ತು.

‘₹1.5 ಕೋಟಿ ಪರಿಹಾರ’

‘ಸಾಕಷ್ಟು ವಿರೋಧದ ನಡುವೆ ತರಾತುರಿಯಲ್ಲಿ ದೇವಸ್ಥಾನ ನೆಲಸಮಗೊಳಿಸಲಾಗಿದೆ. ಇದಕ್ಕೆ ಪ್ರತಿಯಾಗಿ ದೇಗುಲದ ಪಕ್ಕದಲ್ಲೇ 1,750 ಅಡಿ ಜಾಗ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ₹1.50 ಕೋಟಿ ಪರಿಹಾರವನ್ನು ಬಿಎಂಆರ್‌ಸಿಎಲ್ ನೀಡಿದೆ’ ಎಂದು ದೇಗುಲದ ಪ್ರಧಾನ ಅರ್ಚಕ ಬಿ.ಜಿ. ಚನ್ನಕೇಶವ ತಿಳಿಸಿದರು.

‘ಸ್ಥಳೀಯ ಶಾಸಕರು, ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಭಕ್ತರ ಅಭಿಪ್ರಾಯದಂತೆ ಮುಂದುವರಿಯಲಾಗುವುದು’ ಎಂದರು.

ನಮ್ಮ ಮೆಟ್ರೊಗೆ 18.82 ಹೆಕ್ಟೇರ್‌ ಅರಣ್ಯ ಭೂಮಿ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಾಡುಗೋಡಿ ಮತ್ತು ಅಂಜನಾಪುರ ಡಿಪೊ ನಿರ್ಮಾಣಕ್ಕಾಗಿ ಸರ್ಕಾರವು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಒಟ್ಟು 18.82 ಹೆಕ್ಟೇರ್‌ ಅರಣ್ಯ ಭೂಮಿಯನ್ನು ನೀಡಿದೆ.

ಕಳೆದ ಡಿಸೆಂಬರ್‌ನ ವಾರ್ತಾ ಪತ್ರ ಬಿಡುಗಡೆ ಮಾಡಿರುವ ನಿಗಮವು, ಕಾಡುಗೋಡಿ ಮತ್ತು ಅಂಜನಾಪುರ ಡಿಪೊಗಳ ನಿರ್ಮಾಣಕ್ಕೆ ಕ್ರಮವಾಗಿ ಕಾಡುಗೋಡಿ ಅರಣ್ಯಪ್ರದೇಶದಲ್ಲಿ 18.11 ಹೆಕ್ಟೇರ್‌ ಹಾಗೂ ಯು.ಎಂ.ಕಾವಲ್‌ ಅರಣ್ಯದಲ್ಲಿ 0.71 ಹೆಕ್ಟೇರ್‌ನಷ್ಟು ಭೂಮಿ ನೀಡಲು ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರ ರಚಿಸಿದ ತಜ್ಞರ ಸಮಿತಿಯು ಈ ಪ್ರದೇಶದ ಪರಿಶೀಲನೆ ನಡೆಸಿ, ಅನುಮತಿ ನೀಡಿದ ನಂತರ ಮರಗಳನ್ನು ಕಡಿಯುವ ಅಥವಾ ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನಿಗಮ ಹೇಳಿದೆ.

ಎರಡನೇ ಹಂತದಲ್ಲಿ, ಕೆಲವು ಕಡೆ ಭೂಸ್ವಾಧೀನ ವಿಳಂಬವಾಗಿದ್ದರಿಂದ ಕಾಮಗಾರಿಯೂ ವಿಳಂಬವಾಗಿದೆ ಎಂದು ನಿಗಮ ಹೇಳಿದೆ. ನೈಸ್‌ ಭೂಮಿ ಲಭ್ಯವಾಗದ ಕಾರಣ ಗೊಟ್ಟಿಗೆರೆ ಸ್ವಾಗತ ಕ್ರಾಸ್‌ ರಸ್ತೆ (ರೀಚ್‌ 6) ಮಾರ್ಗದಲ್ಲಿ ಕಾಮಗಾರಿ ‍ಪ್ರಗತಿ ಕುಂಠಿತಗೊಂಡಿದೆ ಎಂದು ಅದು ಹೇಳಿದೆ. ರೀಚ್‌ 5ಗೆ ಸಂಬಂಧಿಸಿದಂತೆ ನೈಸ್‌ ಭೂಮಿಯನ್ನು ವಶಪಡಿಸಿಕೊಳ್ಳಲು
ಹೈಕೋರ್ಟ್‌ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ, ರೀಚ್‌ 6ನ ಕಾಮಗಾರಿಯೂ ಕುಂಠಿತಗೊಂಡಿದೆ. ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ಮುಂದುವರಿದಿದೆ ಎಂದು ನಿಗಮ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು