ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಕಾಮಗಾರಿ: ಭೂಸ್ವಾಧೀನ ಬಾಕಿ

38 ಖಾಸಗಿ ಆಸ್ತಿ, 11 ಸರ್ಕಾರಿ ಆಸ್ತಿ ಹಸ್ತಾಂತರಕ್ಕೆ ಕಾಯುತ್ತಿರುವ ಬಿಎಂಆರ್‌ಸಿಎಲ್
Last Updated 23 ಜನವರಿ 2022, 20:28 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ‘ನಮ್ಮ ಮೆಟ್ರೊ’ ಮಾರ್ಗದ ಕಾಮಗಾರಿಗೆ ಇನ್ನೂ 49 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. 38 ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, 11 ಸರ್ಕಾರಿ ಆಸ್ತಿಗಳ ಹಸ್ತಾಂತರ ಆಗಬೇಕಿದೆ.

ಕೆ.ಆರ್.ಪುರದಿಂದ ಹೆಬ್ಬಾಳ ಮಾರ್ಗದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು 38 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಈ ಮಾರ್ಗದಲ್ಲಿ ಸರ್ಕಾರದ 60 ಆಸ್ತಿಗಳು ಹಾಗೂ ಖಾಸಗಿಯವರ 214 ಆಸ್ತಿಗಳು ಸೇರಿ ಒಟ್ಟು 274 ಆಸ್ತಿಗಳು ಸೇರಿ ಒಟ್ಟು 2.22 ಲಕ್ಷ ಚದರ ಮೀಟರ್ ಭೂಮಿ ಸ್ವಾಧೀನ ಆಗಬೇಕಿತ್ತು.

ಈ ಪೈಕಿ 225 ಆಸ್ತಿಗಳಲ್ಲಿನ 2.09 ಲಕ್ಷ ಚದರ ಮೀಟರ್ ಸ್ವಾಧೀನಕ್ಕೆ ಪಡೆದು 2021ರ ಡಿಸೆಂಬರ್‌ನಲ್ಲೇ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿದೆ. ಉಳಿದ ಆಸ್ತಿಗಳ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.

ನಗರದಲ್ಲಿನ ಇನ್ನುಳಿದ ಮೆಟ್ರೊ ರೈಲು ಮಾರ್ಗ ವಿಸ್ತರಣೆ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. 2,326 ಆಸ್ತಿಗಳ ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಇನ್ನು 43 ಆಸ್ತಿಗಳ ಸ್ವಾಧೀನ ಪ್ರಕ್ರಿಯೆಯಷ್ಟೇ ಬಾಕಿ ಇದೆ.

ಶೆಟ್ಟಿಗೆರೆಯಲ್ಲಿ ಡಿಪೊಗೆ ಅಗತ್ಯ ಇರುವ 23 ಎಕರೆಯಲ್ಲಿ 18 ಎಕರೆ ಹಸ್ತಾಂತರವಾಗಿದ್ದು, 5 ಎಕರೆ ಜಾಗದ ವಿಷಯದಲ್ಲಿ ವ್ಯಾಜ್ಯ ಇರುವುದರಿಂದ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಿಂದ ಆದೇಶ ಬಾಕಿ ಇದೆ ಎಂದೂ ಬಿಎಂಆರ್‌ಸಿಎಲ್ ಅಧಿಕಾರಿಗಳು ವಿವರಿಸಿದ್ದಾರೆ.

ಕಾಳೇನ ಅಗ್ರಹಾರದಿಂದ ನಾಗವಾರ ತನಕದ ರೀಚ್–6 ಮಾರ್ಗದ 22 ಕಿ.ಮೀ. ಮಾರ್ಗಕ್ಕೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಪಾಟರಿಟೌನ್‌ ನಿಲ್ದಾಣಕ್ಕೆ, ನಾಗವಾರ ಮೆಟ್ರೊ ನಿಲ್ದಾಣ, ಆರ್‌ಎಂಎಸ್‌ (ವೆಲ್ಲಾರ) ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮಗೊಂಡಿದೆ. ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ತನಕ 18.5 ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಅಗತ್ಯವಿರುವ 1,147 ಚದರ ಮೀಟರ್ ವಿಸ್ತೀರ್ಣ ಸ್ವಾಧೀನಕ್ಕೆ ಭೂಮೌಲ್ಯ ನಿರ್ಧಾರಣಾ ಸಮಿತಿಯ ವರದಿ ಬರಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಾಗಸಂದ್ರದಿಂದ ಬಿಐಇಸಿ (ರೀಚ್‌–3ಸಿ) ಮಾರ್ಗದಲ್ಲಿ ಜಿಂದಾಲ್ ಮತ್ತು ಪ್ರೆಸ್ಟೀಜ್ ಲೇಔಟ್‌ ಮೂಲಕ ಅಂಚೆಪಾಳ್ಯ ಮತ್ತು ಇತರ ಹಳ್ಳಿಗಳಿಂದ ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಚ್ಚುವರಿ ಪ್ರದೇಶದ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಆದ್ದರಿಂದ ಕಾಮಗಾರಿಗೆ ತೊಡಕಾಗಿದ್ದು, ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅವರುಸ್ಪಷ್ಟಪಡಿಸಿದ್ದಾರೆ.

ಸಿವಿಲ್ ಕಾಮಗಾರಿಯ ಪ್ರಗತಿ

ಮಾರ್ಗ; ಕಾಮಗಾರಿ ಪ್ರಗತಿ(ಶೇಕಡವಾರು)

ರೀಚ್–1ಎ(ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ); 96

ರೀಚ್‌–1ಬಿ(ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದಿಂದ ವೈಟ್‌ಫೀಲ್ಡ್‌); 99

ರೀಚ್‌–2ಎ(ಮೈಸೂರು ರಸ್ತೆಯಿಂದ ಪಟ್ಟಣಗೆರೆ); 100

ರೀಚ್‌–2ಬಿ(ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೊ); 99

ರೀಚ್‌ –3ಸಿ(ಹೆಸರಘಟ್ಟ ಕ್ರಾಸ್‌ನಿಂದ ಬಿಐಇಸಿ); 75

ರೀಚ್‌– 5ಪಿ3 (ಬೊಮ್ಮನಹಳ್ಳಿಯಿಂದ ಆರ್‌.ವಿ. ರಸ್ತೆ); 76

ರೀಚ್ –6 (ಕಾಳೇನ ಅಗ್ರಹಾರದಿಂದ ಸ್ವಾಗತ್ ಕ್ರಾಸ್‌ ರಸ್ತೆ); 30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT