ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದಿಂದ ಸಾಗುತ್ತಿದೆ ಮೆಟ್ರೊ ಭೂಗತ ಮಾರ್ಗ: 2025ಕ್ಕೆ ಗುಲಾಬಿ ಮಾರ್ಗ ಸಿದ್ಧ

Published 25 ಸೆಪ್ಟೆಂಬರ್ 2023, 14:48 IST
Last Updated 25 ಸೆಪ್ಟೆಂಬರ್ 2023, 14:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅತಿ ಉದ್ದದ ಭೂಗತ ಹಳಿಯನ್ನು ಹೊಂದಿರುವ ಮೆಟ್ರೊ ಗುಲಾಬಿ ಮಾರ್ಗದ ಕಾಮಗಾರಿ ವೇಗದಿಂದ ಸಾಗುತ್ತಿದೆ. 

ಮೆಟ್ರೊ ರೈಲು ಮಾರ್ಗ ವಿಸ್ತರಣೆಗಾಗಿ ನಡೆಯುತ್ತಿರುವ ಸುರಂಗ ಮಾರ್ಗಗಳು ಮತ್ತು ಸುರಂಗ ನಿಲ್ದಾಣಗಳ ಕಾಮಗಾರಿಗಳು 2025ರ ಮಾರ್ಚ್‌ ಒಳಗೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೊಂದಿದ್ದಾರೆ.

ಹಂತ 2ರ ಯೋಜನೆಯಡಿ ರೀಚ್‌–6 ಮಾರ್ಗ ಇದಾಗಿದೆ. ಒಟ್ಟು ₹ 5,925 ಕೋಟಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳುತ್ತಿದೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿಲೋಮೀಟರ್‌ ಇದೆ. ಅದರಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ. ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, 6 ನಿಲ್ದಾಣಗಳಿವೆ. ಡೈರಿ ವೃತ್ತದಿಂದ ನಾಗವಾರದವರೆಗೆ 13.76 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ 12 ಸುರಂಗ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಆರ್‌ಎಂಎಸ್‌, ಎಂ.ಜಿ ರಸ್ತೆ, ಶಿವಾಜಿನಗರ ನಿಲ್ದಾಣಗಳು ಶೇ 90ರಷ್ಟು ಪೂರ್ಣಗೊಂಡಿವೆ. ಡೈರಿ ಸರ್ಕಲ್‌, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್‌ ಸುರಂಗ ನಿಲ್ದಾಣಗಳ ಕಾಮಗಾರಿ ಶೇ 60ರಷ್ಟು ಆಗಿದೆ.  ಕಂಟೋನ್ಮೆಂಟ್‌, ಪಾಟರಿಟೌನ್‌ ನಿಲ್ದಾಣಗಳು ಶೇ 85ರಷ್ಟು ಹಾಗೂ ಟ್ಯಾನರಿ ರಸ್ತೆ, ವೆಂಕಟೇಶಪುರ, ಕೆ.ಜಿ. ಹಳ್ಳಿ, ನಾಗವಾರ  ನಿಲ್ದಾಣಗಳು ಶೇ 50ರಷ್ಟು ಮುಗಿದಿವೆ.

ಎರಡು ಮಾರ್ಗಗಳ ಸಂಯೋಜನೆ:

ಎಂ.ಜಿ. ರಸ್ತೆಯಲ್ಲಿ ಸದ್ಯ ಇರುವ ನೇರಳೆ ಮಾರ್ಗದ ಮೆಟ್ರೊ ನಿಲ್ದಾಣ ಮತ್ತು ಈಗ ನಿರ್ಮಾಣಗೊಳ್ಳುತ್ತಿರುವ ಗುಲಾಬಿ ಮಾರ್ಗದ ನಿಲ್ದಾಣಗಳ ನಡುವೆ 50 ಮೀಟರ್‌ ಅಂತರ ಇದೆ. ಆದರೂ ಪ್ರಯಾಣಿಕರು ಮಾರ್ಗ ಬದಲಾಯಿಸಲು ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ. ನೇರಳೆ ಮತ್ತು ಗುಲಾಬಿ ನಿಲ್ದಾಣಗಳ ನಡುವಿನ ಓಡಾಟಕ್ಕೆ ಪ್ರಯಾಣಿಕರು ಗೇಟ್‌ ದಾಟಿ ಹೋಗದಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಎಂಜಿನಿಯರ್‌ ಸುಬ್ರಹ್ಮಣ್ಯ ಗುಡ್ಗೆ ತಿಳಿಸಿದ್ದಾರೆ.

2024ರ ಜೂನ್‌ ಒಳಗೆ ಈ ಮಾರ್ಗದ ಎಲ್ಲ ಸಿವಿಲ್, ಟ್ರ್ಯಾಕ್‌ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಿ, ಸಿಗ್ನಲಿಂಗ್‌ ಸಹಿತ ಇತರ ತಾಂತ್ರಿಕ ಕಾರ್ಯಗಳನ್ನು ಶುರು ಮಾಡಬೇಕು.  2025ರಲ್ಲಿ ಗುಲಾಬಿ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಬೇಕು ಎಂಬ ಗುರಿ ಇಟ್ಟುಕೊಂಡು ವೇಗವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಪಾಟರಿ ಟೌನ್‌ನಲ್ಲಿ ರೈಲು ರಿವರ್ಸ್‌ಗೆ ಅವಕಾಶ

6930 ಚದರ ಮೀಟರ್‌ ವ್ಯಾಪ್ತಿಯನ್ನು ಹೊಂದಿರುವ ಪಾಟರಿ ಟೌನ್‌ ನಿಲ್ದಾಣವು ನಗರದ ಅತಿದೊಡ್ಡ ಮೆಟ್ರೊ ನಿಲ್ದಾಣವಾದರೆ 4356 ಚದರ ಮೀಟರ್‌ ವ್ಯಾಪ್ತಿಯ ಎಂ.ಜಿ. ರಸ್ತೆ ನಿಲ್ದಾಣವು ಎರಡನೇ ಅತಿ ದೊಡ್ಡದಾಗಿದೆ. ಪಾಟರಿ ಟೌನ್‌ ನಿಲ್ದಾಣವು ರೈಲುಗಳನ್ನು ರಿವರ್ಸ್‌ ತೆಗೆಯಲು ಸಹಾಯ ಮಾಡುವ ‘ಟರ್ನ್‌ಔಟ್‌ ಲೈನ್‌’ಗಳನ್ನು ಹೊಂದಿದೆ. ಎಂ.ಜಿ. ರಸ್ತೆ ನಿಲ್ದಾಣವು ಈಗ ಇರುವ ಎರಡು ಪ್ರವೇಶದ್ವಾರಗಳಲ್ಲದೇ ಕಬ್ಬನ್‌ ರಸ್ತೆಯ ಎಡ ಮತ್ತು ಬಲ ಬದಿಗಳಲ್ಲಿ ಎರಡು ಸೇರಿ ಒಟ್ಟು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿರಲಿದೆ.

ನಿಯಮ ಉಲ್ಲಂಘಿಸಿದ ವಿದೇಶಿ ಯುಟ್ಯೂಬರ್‌: ಟೀಕೆ

ಬೆಂಗಳೂರು ಮೆಟ್ರೊದಲ್ಲಿ ಟಿಕೆಟ್‌ ಇಲ್ಲದೆ ಹೇಗೆ ಪ್ರಯಾಣಿಸಬಹುದು ಎಂದು ಟಿಕೆಟ್‌ ಇಲ್ಲದೇ ಪ್ರಯಾಣಿಸಿ ಅದರ ವಿಡಿಯೊವನ್ನು ಹಂಚಿಕೊಂಡಿರುವ ವಿದೇಶಿ ಯುಟ್ಯೂಬರ್‌ ಕ್ರಮವು ಟೀಕೆಗೆ ಗುರಿಯಾಗಿದೆ. ಯುಟ್ಯೂಬರ್‌ ವಿರುದ್ಧ ಕ್ರಮ ಕೈಗೊಳ್ಳಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಸೈಪ್ರಸ್ ದೇಶದ ಯುಟ್ಯೂಬರ್‌ ಫಿಡಿಯಾಸ್ ಪನಾಯೊಟೌ ಬೆಂಗಳೂರಿನ ಗ್ರೀನ್‌ ಲೈನ್‌ ಮೆಟ್ರೊದಲ್ಲಿ ಟಿಕೆಟ್‌ ಪಡೆಯದೆ ಗೇಟ್‌ ದಾಟಿ (ಹಾರಿ) ಪ್ರಯಾಣಿಸಿ ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ‘ನಿಯಮ ಉಲ್ಲಂಘಿಸಿದ್ದಲ್ಲದೇ ಸಮಾಜಕ್ಕೆ ತಪ್ಪು ಸಂದೇಶ ಸಾರಿರುವ ವಿದೇಶಿ ಯುಟ್ಯೂಬರ್‌ ವಿರುದ್ಧ ಸುರಕ್ಷತಾ ವಿಭಾಗದ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್‌ ಚವಾಣ್‌ ತಿಳಿಸಿದ್ದಾರೆ. ಬ್ಯಾಕ್‌ ಫ್ಲಿಪ್‌ ಮಾಡಲು ಹೋಗಿ ಬಿದ್ದ ಯುವಕ: ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರ ಗಮನ ಸೆಳೆಯಲು ಯುವಕನೊಬ್ಬ ಬ್ಯಾಕ್‌ ಫ್ಲಿಪ್‌ ಮಾಡಲು ಹೋಗಿ ಆಯ ತಪ್ಪಿ ಬಿದ್ದಿರುವ ವಿಡಿಯೊ ಹರಿದಾಡಿದೆ. ‘ಮೆಟ್ರೊ ಮೇ ಚೋಟ್ ಲಗ್ ಗಯಿ ಗಯ್ಸ್’ ( ನಾನು ಮೆಟ್ರೋದಲ್ಲಿ ಗಾಯಗೊಂಡಿದ್ದೇನೆ ಹುಡುಗರೇ) ಎಂದು ಚಮನ್‌ ಫ್ಲಿಪ್ಪರ್‌ (chaman_flipper) ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊ ಚರ್ಚೆಗೆ ಒಳಗಾಗಿದೆ. ಮೆಟ್ರೊದಲ್ಲಿ ಯಾಕೆ ಈ ಸಾಹಸ ಮಾಡಲು ಹೋಗಿದ್ದೀರಿ ಎಂದು ಅನೇಕರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT