ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಆರಂಭಿಸಿ: ಕಾರ್ಮಿಕರಿಗೆ ಧೈರ್ಯ ತುಂಬಿದ ಸಚಿವ ಸುರೇಶ್ ಕುಮಾರ್

Last Updated 2 ಮೇ 2020, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರೆಡಾಯ್’ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ನಗರದಲ್ಲಿ ಸ್ಥಗಿತಗೊಳಿಸಿರುವ ಸುಮಾರು 414 ಸ್ಥಳಗಳಲ್ಲಿ ತಕ್ಷಣದಿಂದಲೇ ಕಾಮಗಾರಿಗಳನ್ನು ಪ್ರಾರಂಭಿಸಬೇಕು’ ಎಂದು ಸಚಿವ ಸುರೇಶ್ ಕುಮಾರ್ ಅವರು, ಕ್ರೆಡಾಯ್ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಇಲ್ಲಿ ಈ ಸಂಬಂಧ ಕರೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘ಅನ್ಯರಾಜ್ಯಗಳಿಗೆ ಸೇರಿದ ಸಾವಿರಾರು ಕಟ್ಟಡ ಕಾರ್ಮಿಕರು, ಹಣದ ಅಭಾವದಿಂದ ತಮ್ಮ‌ ರಾಜ್ಯಗಳಿಗೆ ತೆರಳಲು ಪ್ರಾರಂಭಿಸಿದ್ದಾರೆ. ಅವರು ಬೀದಿಗೆ ಬಂದರೆ ಅವರ ಹಿತ ಕಾಯಬೇಕಾದುದು ಸರ್ಕಾರದ ಕರ್ತವ್ಯ. ಇವರು ಬೆಂಗಳೂರಿನಲ್ಲಿ ನೆಲೆ‌ನಿಲ್ಲಬೇಕು ಎಂದರೆ ಕಟ್ಟಡ ಕಾಮಗಾರಿಗಳು ಆರಂಭವಾಗಬೇಕು’ ಎಂದರು.

ಸೋಮವಾರದಿಂದಲೇ ಕೆಲಸ: ‘ಸುಮಾರು 70 ಸಾವಿರ ಕಾರ್ಮಿಕರು ತಮ್ಮ ಸಂಘಟನೆಗೆ ಸೇರಿದ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದು, ಈ ಎಲ್ಲ ಕಾರ್ಮಿಕರಿಗೆ ಸೋಮವಾರದಿಂದಲೇ ಕೆಲಸವನ್ನು‌ ನೀಡುವ ಕಾರ್ಯ ಪ್ರಾರಂಭಿಸಲಾಗುವುದು‘ ಎಂದು ಕ್ರೆಡಾ‌ಯ್ ಅಧ್ಯಕ್ಷ ಕಿಶೋರ್ ಹೇಳಿದರು.

‘ಸರ್ಕಾರದ ವತಿಯಿಂದ ಬೇಕಿರುವ ಎಲ್ಲ ಸಹಕಾರವನ್ನೂ ನೀಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್, ಸಮಾಜ ಕಲ್ಯಾಣ‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಇದ್ದರು.

ಕಾರ್ಮಿಕರ ಭೇಟಿ: ಕೆಲಸವಿಲ್ಲದೆ ಅತಂತ್ರರಾಗಿರುವ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಶನಿವಾರ ಬೆಳಗ್ಗೆ ಸಚಿವರು ಭೇಟಿ ಮಾಡಿದರು.

ಯಶವಂತಪುರದ ಎಪಿಎಂಸಿ ಹಾಗೂ ಮಾಗಡಿ‌ ರಸ್ತೆಯ ಕಾವೇರಿಪುರ ಗುಡ್ಡದಲ್ಲಿ‌ ಬಹುವಸತಿ ಸಮುಚ್ಛಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು, ‘ನಗರದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಬೃಹತ್ ನಿರ್ಮಾಣ ಚಟುವಟಿಕೆಗಳು ಶೀಘ್ರ ಆರಂಭವಾಗಲಿದ್ದು, ಯಾವುದೇ ಆತಂಕಕ್ಕೊಳಗಾಗದೇ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು. ಕಟ್ಟಡ ಕಾರ್ಮಿಕರ ಮಾಲೀಕ ರೊಂದಿಗೆ ಸ್ಥಳದಲ್ಲಿಯೇ ಮಾತನಾಡಿ, ಎಲ್ಲಾ ಕಾರ್ಮಿಕರಿಗೆ ನೀಡಬೇಕಿರುವ ಬಾಕಿ‌ಯನ್ನು ಕೂಡಲೇ ನೀಡುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT