ಶನಿವಾರ, ಅಕ್ಟೋಬರ್ 23, 2021
25 °C
ವಸತಿ ಸಚಿವ ವಿ.ಸೋಮಣ್ಣ ಗಡುವು

ನಾಯಂಡಹಳ್ಳಿ ಕೆರೆ ಕಾಮಗಾರಿ 4 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಯಂಡಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವತಿಯಿಂದ ಗೋವಿಂದ ರಾಜ ನಗರ ವಿಧಾನ‌ಸಭಾ ಕ್ಷೇತ್ರ ವ್ಯಾಪ್ತಿಯ ನಾಯಂಡಹಳ್ಳಿ ಕೆರೆ ಮತ್ತು ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡದ ಕಾಮಗಾರಿಗಳನ್ನು ಅವರು ಭಾನುವಾರ ಪರಿಶೀಲನೆ ನಡೆಸಿದರು.

ನಾಯಂಡಹಳ್ಳಿ‌ ಕೆರೆಯು ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಕೆರೆಯನ್ನು ₹ 10 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ. ವೃಷಭಾವತಿ ಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವ ಕಾಮಗಾರಿಯೂ ಇದರಲ್ಲಿ ಸೇರಿದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕ
ವನ್ನು ಇಲ್ಲಿ ಸ್ಥಾಪಿಸಲಾಗುತ್ತದೆ.
ಅಲ್ಲದೇ ಯೋಗ ಕೇಂದ್ರ, ವಾಯು ವಿಹಾರ ಪಥ, ಬೋಟಿಂಗ್,
ಮಕ್ಕಳ ಆಟದಂಗಳ, ವಯಸ್ಕರಿಗೆ ಹೊರಾಂಗಣ ವ್ಯಾಯಾಮ ಶಾಲೆಗಳು ಇಲ್ಲಿ ನಿರ್ಮಾಣಗೊಳ್ಳಲಿವೆ. 

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ತಪಾಸಣೆ: ಪಂತರಪಾಳ್ಯದ (ನಾಯಂಡ ಹಳ್ಳಿ ರೈಲ್ವೆ ನಿಲ್ದಾಣದ ದಾರಿ) ಕೊಳೆಗೇರಿ ಕಟ್ಟಡದ ಪಕ್ಕ ಖಾಲಿ ಇರುವ
4.16 ಎಕರೆ ಪ್ರದೇಶದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. 

‘ಆಸ್ಪತ್ರೆ ಕಾಮಗಾರಿಯನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸೋಮಣ್ಣ ತಿಳಿಸಿದರು.

ಆಸ್ಪತ್ರೆಯ ಆವರಣದ ಸುತ್ತ ನೀರು ನುಗ್ಗದಂತೆ ಚರಂಡಿ ಕಾಮಗಾರಿ ನಡೆಸುವಂತೆ ಹಾಗೂ ಆಸ್ಪತ್ರೆಯ ಮುಂಭಾಗದ ರಸ್ತೆ ಸಮೀಪದ
ಟ್ರಾನ್ಸ್‌ಫಾರ್ಮರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. 

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಮೃತ್ಯುಂಜಯ, ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಗಂಗಾಧರ್, ಮುಖ್ಯ  ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ.ನಿರ್ಮಲಾ ಬುಗ್ಗಿ, ವಲಯ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗ್ಡೆ, ಡಾ.ಮಂಜುಳ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು