ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವುಗೊಳಿಸಿದ ಜಮೀನಿಗೆ ಕಾಂಪೌಂಡ್‌: ಕಂದಾಯ ಸಚಿವ ಆರ್. ಅಶೋಕ

ಸರ್ಕಾರಿ ಜಮೀನು ರಕ್ಷಣೆಗೆ ವಾಚ್‌ಮನ್ ನೇಮಕ * ₹100 ಕೋಟಿ ಮೀಸಲು
Last Updated 9 ಮಾರ್ಚ್ 2021, 21:43 IST
ಅಕ್ಷರ ಗಾತ್ರ

ಬೆಂಗಳೂರು: ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿದ ಬಳಿಕ ಅದರ ರಕ್ಷಣೆಗಾಗಿ ಕಾಂಪೌಂಡ್‌ ಹಾಕಿ ವಾಚ್‌ಮನ್‌ಗಳಿಂದ ಕಾವಲು ವ್ಯವಸ್ಥೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ‘ಇದಕ್ಕಾಗಿ ₹100 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

‘ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಿದರೆ, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಕ್ರಮ ತಪ್ಪಿಸಲು ಬೆಂಗಳೂರಿನಿಂದ ಬೇರೆ ಊರಿಗೆ ವರ್ಗಾವಣೆ ಮಾಡಿದರೆ, ತಕ್ಷಣವೇ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದು ಅಲ್ಲೇ ಬಂದು ಕೂರುತ್ತಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ನಾವು ಈ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದೇವೆ. ಈಗ ಕೈಕಟ್ಟಿದ ಹಾಗೆ ಆಗಿದೆ’ ಎಂದು ಅವರು ಹೇಳಿದರು.

ವಿಷಯ ಪ್ರಸ್ತಾಪಿಸಿದ ಗೂಳಿಹಟ್ಟಿ ಶೇಖರ್, ‘ಆನೇಕಲ್‌ ತಾಲ್ಲೂಕು ಹುಲಿಮಂಗಲ ಗ್ರಾಮದಲ್ಲಿ ಸರ್ವೇ ನಂ. 155ರ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ 45 ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ 12 ಅಂತಸ್ತುಗಳ ಬಹುಮಹಡಿ ನಿರ್ಮಾಣ ಮಾಡಲಾಗಿದೆ. ಒಂದೊಂದು ಫ್ಲ್ಯಾಟ್‌ಗೂ ₹3.50 ಕೋಟಿ ಬೆಲೆ ಇಟ್ಟು ಮಾರಲಾಗುತ್ತಿದೆ. ವಿಶೇಷ ಜಿಲ್ಲಾಧಿಕಾರಿ ಸರ್ಕಾರದ ಮುಖ್ಯಕಾರ್ಯದರ್ಶಿಗಿಂತಲೂ ಪ್ರಭಾವಶಾಲಿಯಾಗಿದ್ದಾರೆ. ಈ ಅಕ್ರಮಗಳ ಬಗ್ಗೆ ಕೂಡಲೇ ತನಿಖೆ ನಡೆಸಿ, ಜಮೀನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ, ‘ಸರ್ವೇ ನಂ. 154,155,156 ಮತ್ತು 350 ರಲ್ಲಿ 470 ಎಕರೆ 17 ಗುಂಟೆ ಜಮೀನಿಗೆ ದಾಖಲೆಗಳೇ ಲಭ್ಯವಿಲ್ಲ. ಬದಲಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇಲ್ಲಿ ಲೇಔಟ್‌ ಮಾಡಿ ನಿವೇಶನಗಳನ್ನು ಹಂಚಲಾಗಿದೆ. ಇವರಿಗೆ ಯಾರ ಭಯವೂ ಇಲ್ಲವಾಗಿದೆ’ ಎಂದರು.

‘ಹುಲಿಮಂಗಲ ಗ್ರಾಮದ ಅಕ್ರಮಕ್ಕೆ ಸಂಬಂಧಿಸಿದಂತೆ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್‌.ಜಯರಾಮ್‌ ಅವರನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ. 41 ನಿವೇಶನಗಳ ಭೂಪರಿವರ್ತನೆ ಆಗಿಲ್ಲದ ಕಾರಣ, ಅನಧಿಕೃತ ಕಟ್ಟಡ ತೆರವುಗೊಳಿಸಲು ಆನೇಕಲ್ ತಹಶೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ’ ಎಂದು ಸಚಿವ ಅಶೋಕ ವಿವರಿಸಿದರು.

ಈ ಸಂಬಂಧ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 136 (3) ಅಡಿ ದಾಖಲಾಗಿದ್ದ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಇದರಲ್ಲಿ 16 ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಆದೇಶವಾಗಿದ್ದು, ಒತ್ತುವರಿ ತೆರವು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಪತ್ರಕರ್ತರಿಗೂ ಕೋವಿಡ್‌ ಪರಿಹಾರ: ಶಾಸಕ ಟಿ.ಡಿ. ರಾಜೇಗೌಡ ಆಗ್ರಹ
ಕೋವಿಡ್‌ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಸರ್ಕಾರವನ್ನು ಒತ್ತಾಯಿಸಿದರು.

ಕೋವಿಡ್‌ ಲಾಕ್‌ಡೌನ್‌ ವೇಳೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಗಲಿರುಳೆನ್ನದೇ ಶ್ರಮಿಸಿದ್ದಾರೆ. ಕೆಲವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರ ಕುಟುಂಬಗಳಿಗೆ ಕೊರೋನಾ ವಾರಿಯರ್ಸ್‌ಗಳಿಗೆ ಪರಿಹಾರ ನೀಡುವ ಮಾದರಿಯಲ್ಲೇ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ಕೊಡುವ ವ್ಯವಸ್ಥೆ ಮಾಡಬೇಕು. ಅನಾರೋಗ್ಯಕ್ಕೆ ತುತ್ತಾದರೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದೂ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT