ಮಂಗಳವಾರ, ನವೆಂಬರ್ 30, 2021
23 °C
ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ ಸಾಧ್ಯತೆ: ಮುನ್ನೆಚ್ಚರಿಕೆ ವಹಿಸಲು ವೈದ್ಯರಿಂದ ಸೂಚನೆ

ಪಟಾಕಿ ಗಾಯ: 24 ಗಂಟೆ ಸೇವೆಗೆ ಮಿಂಟೊ ಆಸ್ಪತ್ರೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಮಿಂಟೊ ಕಣ್ಣಿನ ಆಸ್ಪತ್ರೆಯು ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ದಿನಗಳಲ್ಲಿ 24x7 ಸೇವೆ ನೀಡಲು ಮುಂದಾಗಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ‘ಹಸಿರು ಪಟಾಕಿಗಳಲ್ಲಿಯೂ ರಾಸಾಯನಿಕಗಳು ಇರುತ್ತವೆ. ಹಾಗಾಗಿ, ಅವುಗಳಿಂದಲೂ ಕಣ್ಣಿಗೆ ಅಪಾಯವಿದೆ. ಪಟಾಕಿಯ ಕಿಡಿಗಳು ಕಣ್ಣಿನ ಮೇಲೆ ಬಿದ್ದಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೀಪಾವಳಿಯ ಸಂರ್ಭದಲ್ಲಿ ಬೆಳಕಿನಿಂದ ಕತ್ತಲೆಗೆ ಹೋಗಬಾರದು. ಎಲ್ಲ ರೀತಿಯ ಪಟಾಕಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಬೇಕಿದೆ. ಆದರೆ, ಆ ಉದ್ಯಮವನ್ನು ನಂಬಿಕೊಂಡವರ ಬಗ್ಗೆಯೂ ಗಮನ ಹರಿಸಬೇಕಲ್ಲ’ ಎಂದರು. 

‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50 ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ಹೇಳಿದರು.

ತುರ್ತು ಚಿಕಿತ್ಸೆ ಅಗತ್ಯ: ‘ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಹೊಡೆದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆಯೇ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಮೆಟ್ಟುವುದು ತಪ್ಪಲಿದೆ’ ಎಂದು ತಿಳಿಸಿದರು. 

‘ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗೆ ಪ್ರತಿವರ್ಷ ಸರಾಸರಿ 50ರಿಂದ 60 ಮಂದಿ ದಾಖಲಾಗುತ್ತಿದ್ದಾರೆ. ಇವರುಗಳಲ್ಲಿ ಶೇ 40 ರಷ್ಟು ಗಾಯಾಳುಗಳು 14 ವರ್ಷದ ಒಳಗಿನವರಾಗಿದ್ದಾರೆ. ಹಾಗಾಗಿ, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಮುನ್ನೆಚ್ಚರಿಕೆಗೆ ಕ್ರಮಗಳನ್ನು ಪಾಲಿಸಬೇಕು’ ಎಂದರು.

ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸಹಾಯವಾಣಿ: 9480832430

ಮಿಂಟೊ ವೈದ್ಯರು ನೀಡಿದ ಸಲಹೆಗಳು
* ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ
* ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ
* ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ
* ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ
* ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ
* ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
* ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು
* ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ‌
* ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ
* ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ
* ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ
* ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು