ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಹೆಸರಿನಲ್ಲಿ ವಂಚನೆ: ಬಿಡಿಎ ಎಚ್ಚರಿಕೆ

ಬಿಡಿಎ ನಕಲಿ ಮೊಹರು ಇರುವ ಪತ್ರ ಕಳುಹಿಸುತ್ತಿರುವ ವಂಚಕರು
Last Updated 21 ನವೆಂಬರ್ 2020, 14:18 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ವಂಚಕರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹೆಸರನ್ನು ದುರುಪಯೋಗಪಡಿಸಿಕೊಂಡು ನಾಗರಿಕ ಸೌಲಭ್ಯ ನಿವೇಶನಗಳು ಹಾಗೂ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

‘ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯ ನಿವೇಶನಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಕೆಲವು ಕಿಡಿಗೇಡಿಗಳು ಪ್ರಾಧಿಕಾರದ ಪತ್ರಗಳು, ಅಧಿಕಾರಿಗಳ ಸಹಿ, ಮೊಹರುಗಳನ್ನು ನಕಲು ಮಾಡಿ, ನಾಗರಿಕ ಸೌಲಭ್ಯ ನಿವೇಶನಗಳನ್ನು ಗುತ್ತಿಗೆ ಪಡೆದಿರುವ ಸಂಘ-ಸಂಸ್ಥೆಗಳಿಗೆ ಬಿಡಿಎ ಹೆಸರಿನಲ್ಲಿ ಪತ್ರಗಳನ್ನು ಕಳುಹಿಸುತ್ತಿದ್ದಾರೆ. ಹಂಚಿಕೆ ಮಾಡಲಾದ ನಾಗರಿಕ ಸೌಲಭ್ಯ ನಿವೇಶನ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದರಿಂದ ಗುತ್ತಿಗೆ ರದ್ದುಪಡಿಸಲಾಗುತ್ತಿದೆ ಎಂದು ಭಯ ಹುಟ್ಟಿಸಿ ಹಣವನ್ನು ವಸೂಲಿ ಮಾಡಿರುವುದು ಪತ್ತೆಯಾಗಿದೆ.’

‘ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ, ಕೆಲವು ಮನೆ ಮಾಲೀಕರಿಗೆ ಹಾಗೂ ಭೂ ಮಾಲೀಕರಿಗೂ ಇದೇ ಮಾದರಿಯಲ್ಲಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಕೆಲವು ವಂಚಕರು ಅಕ್ರಮ-ಸಕ್ರಮ ವ್ಯಾಪ್ತಿಗೆ ಒಳಪಡುವ ನಿವೇಶನ ಅಥವಾ ಮನೆ ಸಂಖ್ಯೆ ನಮೂದಿಸಿ, ಪ್ರಾಧಿಕಾರದ ಆಯುಕ್ತರ ಆದೇಶದ ಮೇರೆಗೆ ಎಂಬ ಒಕ್ಕಣೆಯ ಪತ್ರ ಕಳುಹಿಸುತ್ತಿದ್ದಾರೆ. ಮೊಬೈಲ್‌ ಮೂಲಕವೂ ಮಾಲೀಕರನ್ನು ಸಂಪರ್ಕಿಸಿ ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ.’

‘ಇಂತಹ ನಕಲಿ ಪತ್ರಗಳ ಬಗ್ಗೆ ಪ್ರಾಧಿಕಾರದ ಜಾಗೃತ ದಳವು ತನಿಖೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ಹೆಸರಿನಲ್ಲಿ ಇಂತಹ ಯಾವುದೇ ಪತ್ರಗಳನ್ನು ಸ್ವೀಕರಿಸಿದರೆ, ಬಿಡಿಎ ಕೇ೦ದ್ರ ಕಚೇರಿಯನ್ನು ಸಂಪರ್ಕಿಸಿ ನಿಜಾಂಶವನ್ನು ವಿಚಾರಿಸಬೇಕು’ ಎಂದು ಬಿಡಿಎ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT