ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗೊಳಿಸುತ್ತಿದೆ ‘ಮಿಯಾವಕಿ’ ಕಾಡು

ಜೆ.ಪಿ.ನಗರ: ಸ್ಥಳೀಯರ ಶ್ರಮದಿಂದ ಸೃಷ್ಟಿಯಾಯಿತು ಕಿರು ಅರಣ್ಯ
Last Updated 8 ಜುಲೈ 2020, 20:55 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರ 9ನೇ ಹಂತದ ರಾಯಲ್‌ ಪಾರ್ಕ್‌ ರೆಸಿಡೆನ್ಸಿ ಬಡಾವಣೆಯ ಬಳಿ 8 ಸಾವಿರ ಚದರ ಅಡಿ ಜಾಗದಲ್ಲಿ ಒಂದೇ ವರ್ಷದಲ್ಲಿ ಕಿರು ಅರಣ್ಯವೊಂದು ತಲೆಯೆತ್ತಿದೆ. ಸ್ಥಳೀಯರೇ ಮುತುವರ್ಜಿ ವಹಿಸಿ ಇದನ್ನು ಬೆಳೆಸಿದ್ದಾರೆ.

‘ನಮ್ಮ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಉದ್ಯಾನಕ್ಕೆ ಕಾಯ್ದಿರಿಸಿದ್ದ ಜಾಗ ಖಾಲಿ ಇತ್ತು. ನಾನು ಯೂಟ್ಯೂಬ್‌ನಲ್ಲಿ ಜಪಾನ್‌ನ ಸಸ್ತಜ್ಞ ಅಕಿರಾ ಮಿಯಾವಾಕಿ ತೋರಿಸಿದ ಮಾದರಿಯಲ್ಲಿ ಕಿರು ಅರಣ್ಯ ಬೆಳೆಸುವ ವಿಡಿಯೊಗಳನ್ನು ನೋಡಿದ್ದೆ. ನಗರದಲ್ಲೂ ಕೆಲವು ಕಾರ್ಪೊರೇಟ್‌ ಸಂಸ್ಥೆಗಳು ನಾಲ್ಕೈದು ಕಡೆ ಮಿಯಾವಕಿ ಕಾಡು ಬೆಳೆಸಿದ್ದನ್ನು ಕೇಳಿದ್ದೆ. ಹಾಗಾಗಿ ಈ ಖಾಲಿ ಜಾಗದಲ್ಲಿ ಸ್ಥಳೀಯರೇ ಸೇರಿ ಕಿರುಕಾಡನ್ನು ಬೆಳೆಸುವ ಆಲೋಚನೆ ಮೂಡಿತು. ಬಿಡಿಎ ಇದಕ್ಕೆ ಅನುಮತಿ ನೀಡಿತು’ ಎನ್ನುತ್ತಾರೆರಾಯಲ್‌ಪಾರ್ಕ್‌ ರೆಸಿಡೆನ್ಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಚಂದ್ರಶೇಖರ್‌ ಕಾಕಲ್‌.

‘ನಮ್ಮ ಬಡಾವಣೆಯ ಆರ್‌ಡಬ್ಲ್ಯುಎ ಸದಸ್ಯರೂ ಈ ಕಾರ್ಯಕ್ಕೆ ಖುಷಿಯಿಂದ ಕೈಜೋಡಿಸಿದರು. ‘ನಮ್ಮ ರಸ್ತೆ ನಮ್ಮ ಹೆಮ್ಮೆ’ ಹೆಸರಿ
ನಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಿದೆವು. ನಾವೆಲ್ಲ ಸೇರಿ ಗಿಡಗಳನ್ನು ನೆಟ್ಟು, ಕಚ್ಚಾ ಬೇಲಿ ನಿರ್ಮಿಸಿದೆವು’ ಎಂದು ಕಾಕಲ್‌ ವಿವರಿಸಿದರು.

ಕಳೆದ ವರ್ಷ ನೆಟ್ಟ ಗಿಡಗಳು 6 ಅಡಿಗಳಿಂದ 10 ಅಡಿಗಳಷ್ಟು ಎತ್ತರಕ್ಕೆ ಬೆಳೆದಿವೆ. ಹಸಿರಿನಿಂದ ಕಂಗೊಳಿಸುತ್ತಿರುವ ಈ ಕಿರುಕಾಡು ಸ್ಥಳೀಯರಲ್ಲಿ ಮತ್ತಷ್ಟು ಹುರುಪು ತುಂಬಿದ್ದು, ಅವರೀಗ 12 ಸಾವಿರ ಚದರ ಅಡಿಗಳಷ್ಟು ಖಾಲಿ ಪ್ರದೇಶದಲ್ಲಿ ಮತ್ತೊಂದು ಕಿರುಕಾಡನ್ನು ಬೆಳೆಸುತ್ತಿದ್ದಾರೆ. ಜಾಗ ಸಮತಟ್ಟುಗೊಳಿಸಿ, ಗುಂಡಿಗಳನ್ನು ತೆಗೆದು ತರಗೆಲೆಗಳನ್ನು ತುಂಬಿಸಿ, ಜೂನ್‌ 28ರಂದು ಸುಮಾರು 45 ಪ್ರಭೇದಗಳ 1,065 ಗಿಡಗಳನ್ನು ನೆಟ್ಟಿದ್ದಾರೆ.

ಆಡುಸೋಗೆ, ಚಕ್ರಮುನಿ, ಬೆಟ್ಟದನೆಲ್ಲಿ, ಕಿರುನೆಲ್ಲಿ, ಅಶ್ವಗಂಧ, ಬಿಳಿ ಎಕ್ಕದಂತಹ ಔಷಧೀಯ ಸಸ್ಯಗಳು, ಪಕ್ಷಿಗಳಿಗೆ ಹಣ್ಣು ಒದಗಿಸುವ ಜಂಬುನೇರಳೆ, ಬಾದಾಮಿ, ರೆಂಜ, ಆಲ, ಸೀಬೆ, ಸೀತಾಫಲ, ದಾಳಿಂಬೆ, ಅತ್ತಿ ಮುಂತಾದ ಗಿಡಗಳು, ತಬೂಬಿಯ, ಹೆಬ್ಬೇವು, ಹೊಂಗೆ, ಬನ್ನಿ, ಮುತ್ತುಗ, ಶಿವಾನಿ, ಅಂಟುವಾಳ, ನುಗ್ಗೆ, ಹೂವರಸಿ, ಬೀಟೆ, ಬಸವನಪಾದ, ಮಹಾಘನಿ, ಶ್ರೀಗಂಧ ಮುಂತಾದ ನೆರಳು ನೀಡುವ ಮರಗಳು ಇವುಗಳಲ್ಲಿವೆ.

‘ನಾವು ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿದ್ದೇವೆ. ಈ ಪ್ರದೇಶದಲ್ಲಿ ಬೆಳೆಯುವ ಗಿಡಗಳನ್ನೇ ನೆಟ್ಟಿದ್ದೇವೆ. ಅರಣ್ಯ ಇಲಾಖೆಯ ನೆಡುತೋಪಿನವರು ಕಡಿಮೆ ದರದಲ್ಲಿ ಗಿಡಗಳನ್ನು ಒದಗಿಸಿದ್ದಾರೆ. ಇನ್ನು ಐದಾರು ವರ್ಷಗಳಲ್ಲಿ ಈ ಪ್ರದೇಶದಲ್ಲಿ 20 ಸಾವಿರ ಚದರ ಅಡಿ ಪ್ರದೇಶದಲ್ಲಿ ಸಮೃದ್ಧವಾದ ಕಿರುಕಾಡನ್ನು ಕಾಣಬಹುದು’ ಎಂದು ಕಾಕಲ್‌ ತಿಳಿಸಿದರು.

ಬಡಾವಣೆ ನಿವಾಸಿಗಳ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅಂಜನಾಪುರ ವಾರ್ಡ್‌ನ ಕಾರ್ಪೊರೇಟರ್‌ ಕೆ.ಸೋಮಶೇಖರ್‌, ಗಿಡಗಳಿಗೆ ನೀರುಣಿಸಲು ವ್ಯವಸ್ಥೆ ಮಾಡುವುದಾಗಿ ಹಾಗೂ ಈ ಪ್ರದೇಶಕ್ಕೆ ಸದೃಢ ಬೇಲಿ ಹಾಕಿಸುವುದಾಗಿ ಭರವಸೆ ನೀಡಿದ್ದಾರೆ.

***

ಎಲ್ಲ ಕೆಲಸಕ್ಕೂ ಸರ್ಕಾರವನ್ನು ಕಾಯಬಾರದು. ಜನ ತಮ್ಮ ಬೀದಿಯನ್ನು ಹಸಿರಾಗಿಟ್ಟರೆ ಇಡೀ ನಗರವೇ ಹಸಿರಿನಿಂದ ಕಂಗೊಳಿಸಲಿದೆ. ನಮ್ಮ ಪ್ರಯತ್ನ ಇತರ ಬಡಾವಣೆಗಳ ನಿವಾಸಿಗಳಿಗೂ ಮಾದರಿಯಾಗಲಿ

- ಚಂದ್ರಶೇಖರ ಕಾಕಲ್‌, ರಾಯಲ್‌ ಪಾರ್ಕ್‌ ರೆಸಿಡೆನ್ಸಿ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT