ಬುಧವಾರ, ಮೇ 12, 2021
17 °C
* ಮಳಿಗೆ ಇಟ್ಟುಕೊಂಡಿದ್ದ ಆರೋಪಿ * ಕದ್ದ ಮೊಬೈಲ್‌ಗಳ ಬಿಡಿಭಾಗ ಮಾರಾಟ

ಮೊಬೈಲ್ ಸುಲಿಗೆ; ‘ಬಡಾ– ಚೋಟಾ’ ಮಚ್ಚರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರ್ವಜನಿಕರನ್ನು ಅಡ್ಡಗಟ್ಟಿ ಕೊಲೆ ಬೆದರಿಕೆಯೊಡ್ಡಿ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಸುಲಿಗೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ವಿ.ವಿ.ಪುರ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರ ನಿವಾಸಿ ಇಮ್ರಾನ್ ಖಾನ್ ಅಲಿಯಾಸ್ ಬಡಾ ಮಚ್ಚರ್ (24), ಇರ್ಫಾನ್ ಪಾಷಾ ಅಲಿಯಾಸ್ ಚೋಟಾ ಮಚ್ಚರ್ (19) ಹಾಗೂ ಓಕಳಿಪುರದ ರಾಜು ಸಿಂಗ್ (27) ಬಂಧಿತರು. ಅವರಿಂದ ₹ 8.20 ಲಕ್ಷ ಮೌಲ್ಯದ 70 ಮೊಬೈಲ್‌ಗಳು, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿ.ವಿ. ಪುರ, ಚಾಮರಾಜಪೇಟೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮೊಬೈಲ್ ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದವು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು’ ಎಂದು ತಿಳಿಸಿದರು.

‘ಜೆ.ಸಿ.ರಸ್ತೆಯಲ್ಲಿ ಕಾರುಗಳಿಗೆ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡಿಕೊಂಡಿದ್ದ ಬಡಾ ಮಚ್ಚರ್, ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಆತನ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇನ್ನೊಬ್ಬ ಆರೋಪಿ ಚೋಟಾ ಮಚ್ಚರ್, ಮೆಜೆಸ್ಟಿಕ್‌ ಪಾದಚಾರಿ ಮಾರ್ಗದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಈತನ ವಿರುದ್ಧ ವಿ.ವಿ.ಪುರ, ಸಿದ್ದಾಪುರ ಹಾಗೂ ಚಂದ್ರಾ ಲೇಔಟ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿದ್ದವು’ ಎಂದೂ ಪೊಲೀಸರು ಹೇಳಿದರು.

‘ಇಬ್ಬರೂ ಆರೋಪಿಗಳು ಒಟ್ಟಿಗೆ ಸೇರಿ ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳನ್ನು ಸುಲಿಗೆ ಮಾಡಲಾರಂಭಿಸಿದ್ದರು. ಅವರ ಕೃತ್ಯದ ಬಗ್ಗೆ ಹಲವು ಸಾರ್ವಜನಿಕರು ದೂರು ನೀಡಿದ್ದರು’ ಎಂದೂ ತಿಳಿಸಿದರು.

ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದ ಆರೋಪಿ: ‘ಪ್ರಕರಣದ ಆರೋಪಿ ರಾಜುಸಿಂಗ್, ಗಾಂಧಿನಗರದ ಎಸ್‌.ಎನ್‌. ಬಜಾರ್‌ನಲ್ಲಿ ಮೊಬೈಲ್ ದುರಸ್ತಿ ಮಳಿಗೆ ಇಟ್ಟುಕೊಂಡಿದ್ದ. ಆರೋಪಿಗಳು ಸುಲಿಗೆ ಮಾಡಿ ತಂದುಕೊಡುತ್ತಿದ್ದ ಮೊಬೈಲ್‌ಗಳ ಬಿಡಿಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದ’ ಎಂದೂ ಪೊಲೀಸರು ಹೇಳಿದರು.

‘ರಾತ್ರಿ ಸಂದರ್ಭದಲ್ಲೇ ಆರೋಪಿಗಳು ಹೆಚ್ಚು ಸುಲಿಗೆ ಮಾಡುತ್ತಿದ್ದರು. ಮೊಬೈಲ್‌ಗಳನ್ನು ರಾಜುಸಿಂಗ್‌ಗೆ ಕೊಟ್ಟು ಹಣ ಪಡೆಯುತ್ತಿದ್ದರು’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು