ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅದಾನಿ ಸಂಪತ್ತು ವೃದ್ಧಿಗೆ ಮೋದಿ ಕಾರಣ’

ಕಾಂಗ್ರೆಸ್‌ ಮುಖಂಡ ಬಿ.ಕೆ.ಚಂದ್ರಶೇಖರ್ ಆರೋಪ
Last Updated 4 ಫೆಬ್ರುವರಿ 2023, 18:55 IST
ಅಕ್ಷರ ಗಾತ್ರ

ಬೆಂಗಳೂರು: ಅದಾನಿ ಸಮೂಹದ ಸಂಪತ್ತು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಆಪಾದಿಸಿದರು.

ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 2013ರ ಸೆಪ್ಟೆಂಬರ್ ವೇಳೆಗೆ ಅದಾನಿ ಸಂಪತ್ತು ಅಂಬಾನಿ ಸಂಪತ್ತಿನಷ್ಟಿತ್ತು. ಮೋದಿ ಅವರು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಸಂಪತ್ತು ಹೆಚ್ಚಾಯಿತು. ಮೋದಿ ಅವರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ ತಕ್ಷಣವೇ ಅದಾನಿ ಗ್ರೂಪ್ ಷೇರುಗಳು ಗಗನಕ್ಕೇರಿದ್ದಲ್ಲದೇ, ಅವರ ಸಂಪತ್ತಿನ ಮೌಲ್ಯ ₹60 ಸಾವಿರ ಕೋಟಿಗೆ ಏರಿದ್ದಾಗಿ ಮಾಧ್ಯಮಗಳು ವಿವರಿಸಿದ್ದವು ಎಂದು ಅವರು ಹೇಳಿದರು.

2014ರ ಲೋಕಸಭೆ ಚುನಾವಣೆ ಮುನ್ನ ಮೋದಿ ಅವರು ಅದಾನಿ ಅವರ ಚಾರ್ಟೆಡ್ ವಿಮಾನದಲ್ಲಿ ದೇಶದಾದ್ಯಂತ ಪ್ರವಾಸ ಮಾಡಿದರು. ಚುನಾವಣೆಯಲ್ಲಿ ಮೋದಿಯವರು ಗೆದ್ದಾಗ ಪ್ರಮಾಣ ವಚನ ಸ್ವೀಕರಿಸಲು ಅಹಮದಾಬಾದ್‌ನಿಂದ ದೆಹಲಿಗೆ ಅದಾನಿ ಅವರ ಖಾಸಗಿ ವಿಮಾನದಲ್ಲಿ ಹೋಗಿದ್ದರು. ಮೋದಿ ಪ್ರಧಾನಿಯಾದ ಬಳಿಕ ಮಾಡಿದ ಬಹುತೇಕ ಎಲ್ಲ ವಿದೇಶ ಪ್ರವಾಸಗಳಿಗೆ ಅದಾನಿ ಅವರನ್ನು ಖಾಸಗಿ ಅತಿಥಿಯನ್ನಾಗಿ ಕರೆದುಕೊಂಡು ಹೋಗಿದ್ದಾರೆ. ಇದರ ಪರಿಣಾಮವಾಗಿ ಅದಾನಿ ಅವರು ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದರು ಎಂದು ಅವರು ಹೇಳಿದರು.

ಶ್ರೀಲಂಕಾ ಸಮುದ್ರ ತೀರದಲ್ಲಿ ಇಂಧನ ಉತ್ಪಾದನೆ ಅವಕಾಶವನ್ನು ಅದಾನಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಶಿಫಾರಸು ಮಾಡಿತು. ಬಂಡವಾಳಶಾಹಿಗಳ ಪರವಾಗಿ ಸರ್ಕಾರ ನಿಲ್ಲುವುದು ಅಪಾಯಕಾರಿ. ಈ ವಿಚಾರದಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ಪ್ರತಿಷ್ಠಿತ ಕಾರ್ಪೋರೇಟ್, ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ನಾಗರಿಕ ನ್ಯಾಯಮಂಡಳಿ ರಚಿಸಿ ಅದರಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಅದಾನಿ ಸಮೂಹದ ಆಸ್ತಿ ₹ 8200 ಕೋಟಿಯಿಂದ ₹9.94 ಲಕ್ಷ ಕೋಟಿ ಆಗಲು ಕಾರಣ ಏನು ಎಂಬುದು ಬಹಿರಂಗವಾಗಬೇಕಿದೆ. ಅದಾನಿಯಂತಹ ಉದ್ಯಮ ಸಮೂಹ ರಕ್ಷಿಸಲು ಪ್ರಧಾನಿ ಅವರು ಮುಂದಾಗಿರುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT