ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6.87 ಲಕ್ಷ ವಾಹನಗಳಿಗೆ ನಿಗಾ ಉಪಕರಣ

Last Updated 3 ನವೆಂಬರ್ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ಹೆದ್ದಾರಿಗಳಲ್ಲಿ ಅಪಘಾತಗಳು, ವಾಹನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಘಟನೆಗಳನ್ನು ತಪ್ಪಿಸಲು ಶಾಲಾ ವಾಹನಗಳೂ ಸೇರಿದಂತೆ ಸುಮಾರು 6.87 ಲಕ್ಷ ಸಾರ್ವಜನಿಕ ಸಾರಿಗೆ ವಾಹನಗಳಿಗೆ ವಾಹನ ಚಲನೆ ನಿಗಾ ಉಪಕರಣಗಳು (ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್ ಡಿವೈಸ್) ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಕೇಂದ್ರ ಸಹಭಾಗಿತ್ವದ ಈ ಯೋಜನೆಗೆ ₹20.30 ಕೋಟಿ ಅನುದಾನ ನೀಡಲು ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಇದಕ್ಕೆ ಕೇಂದ್ರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಅನುದಾನ ನೀಡುತ್ತವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ಬಸ್‌ಗಳು, ಕ್ಯಾಬ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಸೇರಿ ವಿವಿಧ ರೀತಿಯ ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಈ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ ಎಲ್ಲ ರಾಜ್ಯಗಳಿಗೂ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲು ನೆರವು ನೀಡುತ್ತಿದೆ. ಇದಕ್ಕೆ ಕ್ಲೌಡ್‌ ಸರ್ವಿಸ್‌ ಸೇವೆಯನ್ನೂ ಕೇಂದ್ರವೇ ನೀಡುತ್ತದೆ ಎಂದರು.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ವೇಗದಲ್ಲಿ ಚಲಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ. ಇಂತಹ ಅಪಘಾತಗಳನ್ನು ನಿಯಂತ್ರಿಸಲು ವಾಹನಗಳು ಸಂಚರಿಸುತ್ತಿರುವ ಹಾದಿಯ ಮೇಲೆ ಕಣ್ಣಿಟ್ಟು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಿದೆ. ವಾಹನಗಳು ನಿಗದಿತ ವೇಗದಲ್ಲಿ ಮತ್ತು ನಿಗದಿತ ರಸ್ತೆಯಲ್ಲಿ ಸಾಗುತ್ತಿವೆಯೇ? ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲ್ಲಿಸಿದ್ದಾರೆಯೇ? ವಾಹನ ಸಂಚಾರದಲ್ಲಿ ಅನಗತ್ಯ ವಿಳಂಬವಾಗುತ್ತಿದೆಯೇ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆಯೇ ಮುಂತಾದ ಚಟುವಟಿಕೆಗಳನ್ನು ನಿಯಂತ್ರಣ ಕೊಠಡಿಗಳಿಂದ ಗಮನಿಸಲಾಗುವುದು ಮತ್ತು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಎಷ್ಟು ವಾಹನಗಳಿಗೆ ಅಳವಡಿಕೆ

ಟ್ಯಾಕ್ಸಿ, ಕ್ಯಾಬ್‌, ಮ್ಯಾಕ್ಸಿ ಕ್ಯಾಬ್‌;4.51 ಲಕ್ಷ

ಶಾಲಾ ವಾಹನ ಮತ್ತು ಬಸ್‌ಗಳು; 16,432

ಖಾಸಗಿ ಪ್ರಯಾಣಿಕ ವಾಹನಗಳು;73,077

ಕೆಎಸ್‌ಆರ್‌ಟಿಸಿ ಬಸ್‌ಗಳು;24,701

ಒಪ್ಪಂದ ವಾಹನಗಳು;5,130

ಅಖಿಲ ಭಾರತ ಪರ್ಮಿಟ್‌ ಹೊಂದಿರುವ ವಾಹನಗಳು;1,900

ಸರಕು ಸಾಗಣೆ ವಾಹನಗಳು;85,049

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT