ಶನಿವಾರ, ಆಗಸ್ಟ್ 20, 2022
21 °C
ಸರ್ಕಾರದ ಮೇಲೆ ದಾಳಿಗೆ ‘ಕೈ’ ನಾಯಕರ ಸಿದ್ಧತೆ

ಸೆಪ್ಟಂಬರ್ 21ರಿಂದ ಮುಂಗಾರು ಅಧಿವೇಶನ: ಕಾಂಗ್ರೆಸ್‌ ಶಾಸಕರಿಂದ 1,200 ಪ್ರಶ್ನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಕೇತಿಕ ಚಿತ್ರ

ಬೆಂಗಳೂರು: ಸೆ. 21ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ 1,200ಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ರಾಜ್ಯ ಸರ್ಕಾರದ ಮುಂದಿಡಲು ಕಾಂಗ್ರೆಸ್‌ ಶಾಸಕರು ನಿರ್ಧರಿಸಿದ್ದಾರೆ.

ಈ ಪ್ರಶ್ನೆಗಳು ಈಗಾಗಲೇ ಸಿದ್ಧವಾಗಿದ್ದು, ಅದನ್ನು ವಿಧಾನಸಭೆ ಹಾಗೂ ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಿಗೆ ಸೂಚಿಸಿದರು.

ಮಾಜಿ ಸಚಿವರ ತಂಡ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿ, ವಿಧಾನಸಭೆ, ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕರ ಕಚೇರಿ ಶಾಸಕರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಅವರು ಶಾಸಕರೊಂದಿಗೆ ಆನ್‌ಲೈನ್‌ ಮೂಲಕ ಸೋಮವಾರ ಸಮಾಲೋಚನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ನಾಯಕರಾದ ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ ಹಾಗೂ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸಂವಾದದಲ್ಲಿ ಭಾಗವಹಿಸಿದರು.

‘ರಾಜ್ಯ ಸರ್ಕಾರ ಹಲವು ವಿಷಯಗಳಲ್ಲಿ ಎಡವಿದೆ. ಕೊರೊನಾ ಸೋಂಕು ನಿಯಂತ್ರಣದಲ್ಲಂತೂ ಸಂಪೂರ್ಣವಾಗಿ ವಿಫಲವಾಗಿದೆ. ಈ ಕುರಿತು ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚೆ ನಡೆಸಬೇಕಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆಯೂ ಸದನದಲ್ಲಿ ಗಂಭೀರವಾಗಿ ಪ್ರಶ್ನೆ ಮಾಡಬೇಕಿದೆ’ ಎಂದು ಶಾಸಕರಿಗೆ ತಿಳಿಸಿದರು.

‘ಸರ್ಕಾರದಲ್ಲಿ ಕೆಲಸ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುತ್ತದೆ. ಕೇಂದ್ರದಿಂದ ನಾವು ಸಾಕಷ್ಟು ನೆರವು ಪಡೆಯುತ್ತೇವೆ ಎಂದು ಯಡಿಯೂರಪ್ಪ ಮತ್ತಿತರ ನಾಯಕರು ಹೇಳಿದ್ದರು. ಜಿಎಸ್‍ಟಿ ವಿಚಾರದಲ್ಲಿ ಪರಿಹಾರ ಕೇಳಿದರೆ ನೀವು ಸಾಲ ಮಾಡಿ ನಷ್ಟ ತುಂಬಿಕೊಳ್ಳಿ ಎಂದು ಕೇಂದ್ರದ ಹಣಕಾಸು ಸಚಿವರು ಹೇಳುತ್ತಾರೆ. ಇಂಥ ವಿಷಯಗಳ ಮೇಲೆಯೂ ಪ್ರಶ್ನೆ ಮಾಡಬೇಕಿದೆ’ ಎಂದರು.

‘ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿಯ 25 ಸಂಸದರು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಯಡಿಯೂರಪ್ಪ ಅವರು ಉಸಿರು ಎತ್ತುತ್ತಿಲ್ಲ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಮಾತ್ರ ಕೇಂದ್ರದ ನಡೆಯನ್ನು ಟೀಕಿಸಿವೆ. ಬಿಜೆಪಿ ಸರ್ಕಾರಗಳು ಕೋಲೆ ಬಸವನ ರೀತಿ ತಲೆ ಆಡಿಸುತ್ತಿವೆ’ ಎಂದು ಟೀಕಿಸಿದರು.

’ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಕುರಿತು ಮಂತ್ರಿಗಳೇ ಅಲ್ಲಲ್ಲಿ ಮಾತನಾಡುತ್ತಿದ್ದಾರೆ. ಪರ್ಸೆಂಟೇಜ್ ಕೊಡದ ಶಾಸಕರ ಕ್ಷೇತ್ರಗಳಿಗೆ ಅನುದಾನ ಇಲ್ಲ ಎಂಬಂತೆ ಆಗಿದೆ. ಬಿಜೆಪಿ ಮಂತ್ರಿಗಳ ಕ್ಷೇತ್ರದಲ್ಲಿಯೂ ಅನುದಾನಕ್ಕಾಗಿ ಲಂಚ ನೀಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಾಗಿಯೂ ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಬೇಕಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು