ಭಾನುವಾರ, ಡಿಸೆಂಬರ್ 8, 2019
20 °C
ಕಳ್ಳರ ಎರಡು ಗುಂಪಿನ ನಡುವೆ ಜಗಳ

ಒಬ್ಬನ ಹತ್ಯೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಳ್ಳರ ಎರಡು ಗುಂಪಿನ ಮಧ್ಯೆ ನಡುವೆ ನಡೆದ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ನಾಗೇಂದ್ರ ಬ್ಲಾಕ್ ನಿವಾಸಿ ಸುದರ್ಶನ್ ಅಲಿಯಾಸ್ ಸುದಾ (22) ಕೊಲೆಯಾದ ಯುವಕ. ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿ ಜೊತೆಗಿನ ಸಂಬಂಧ ಮತ್ತು ಸುದರ್ಶನ ಜೈಲಿನಲ್ಲಿದ್ದ ಸಂದರ್ಭದಲ್ಲಿ ಜಾಮೀನಿಗೆ ಹಣಕಾಸಿನ ನೆರವು ನೀಡಲಿಲ್ಲ ಎಂಬ ಕಾರಣಕ್ಕೆ ಎರಡೂ ಗುಂಪುಗಳ ನಡುವೆ ಜಗಳ ನಡೆದಿತ್ತು ಎಂದು ಗೊತ್ತಾಗಿದೆ.

ಸುದರ್ಶನ್ ವಿರುದ್ಧ ಗಿರಿನಗರ, ಹನುಮಂತ ನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳವು, ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಕಳವು ಪ್ರಕರಣದಲ್ಲಿ 2017ರಲ್ಲಿ ಜೈಲು ಸೇರಿದ್ದ ಸುದರ್ಶನ್‌, 10 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.

ಸುದರ್ಶನ್ ಜೈಲಿನಲ್ಲಿದ್ದ ವೇಳೆ ಜಾಮೀನು ಪಡೆದು ಹೊರಬರಲು ಆತನಿಗೆ ಪರಿಚಯವಿದ್ದ ಕಳ್ಳರ ಗುಂಪು ಹಣದ ನೆರವು ನೀಡಿರಲಿಲ್ಲ. ಈ ವಿಚಾರಕ್ಕೆ ಆತ ಆ ಗುಂಪಿನ ಸದಸ್ಯರ ಮೇಲೆ ಆಕ್ರೋಶಗೊಂಡಿದ್ದ. ಅಲ್ಲದೆ, ಜೈಲಿನಿಂದ ಹೊರಬಂದ ಬಳಿಕ ವಿರೋಧಿ ಗುಂಪಿಗೆ ಹೆಚ್ಚು ಪರಿಚಯವಿದ್ದ ಯುವತಿಯೊಬ್ಬಳ ಜತೆ ಸಲುಗೆ ಹೊಂದಿದ್ದ ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಮಾತನಾಡುವ ಸಲುವಾಗಿ ಸುದರ್ಶನ್‌ನನ್ನು ಪಿಪಿ ಲೇಔಟ್‌ಗೆ ಬರುವಂತೆ ವಿರೋಧಿ ಗುಂಪಿನ ಸದಸ್ಯರು ಕರೆದಿದ್ದರು. ಅದರಂತೆ, ತನ್ನ ಇಬ್ಬರು ಸಹಚರರ ಜತೆ 11 ಗಂಟೆ ಸುಮಾರಿಗೆ ಪಿಪಿ ಲೇಔಟ್‌ಗೆ ಸುದರ್ಶನ್‌ ಹೋಗಿದ್ದ. ಈ ವೇಳೆ ಎರಡೂ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕೈ-ಕೈ ಮಿಲಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿರೋಧಿ ತಂಡದಲ್ಲಿದ್ದವರು ಸುದರ್ಶನ್‌ನ ಹೊಟ್ಟೆಗೆ ಇರಿದಿದ್ದಾರೆ. ಗಾಯಾಳು ಸ್ಥಳದಿಂದ ಓಡಿ ಹೋಗಲು ಯತ್ನಿಸಿದರೂ ಆರೋಪಿಗಳು ಆತನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.‌ ಸ್ಥಳದಲ್ಲೇ ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ಬೈಕ್‌ ಸವಾರನ ಮೇಲೆ ಹಲ್ಲೆ
ಬೆಂಗಳೂರು:
ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಲು ಪೊಲೀಸರು ಬಳಸುವ ಪಿಡಿಆರ್ ಮೆಷಿನ್‌ ಬಳಸಿ, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನ ಸವಾರರಿಂದ ಟೋಯಿಂಗ್ ಕಾರ್ಮಿಕ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ಹೆಬ್ಬಾಳದಲ್ಲಿ ಬಯಲಿಗೆ ಬಂದಿದೆ.

ಎಎಸ್‌ಐ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್‌ ಅಧಿಕಾರಿ ಮಾತ್ರ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಆದರೆ, ಪೊಲೀಸ್‌ ಅಧಿಕಾರಿಯೊಬ್ಬರು ಟೋಯಿಂಗ್ ಕಾರ್ಮಿಕನ ಕೈಗೆ ‌ಪಿಡಿಆರ್ ಮೆಷಿನ್‌ ಕೊಟ್ಟಿದ್ದಾರೆ. ಅದನ್ನು ಬಳಸಿ ಆ ಕಾರ್ಮಿಕ, ನೋ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಸವಾರರಿಂದ ದಂಡ ವಸೂಲಿ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದ ಬೈಕ್ ಸವಾರನಿಗೆ ನಾಲ್ವರು ಟೋಯಿಂಗ್ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ.

ಹೆಬ್ಬಾಳ ರಸ್ತೆಯ ಪಶುವೈದ್ಯಕೀಯ ಕಾಲೇಜು ಎದುರಿನ ಬಸ್ ತಂಗುದಾಣದ ಬಳಿ ನೋ ಪಾರ್ಕಿಂಗ್ ಸ್ಥಳದಲ್ಲಿ ಕೆಲವರು ಬೈಕ್‌ಗಳನ್ನು ನಿಲ್ಲಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಲ್ಲಿಗೆ ಹೋಗಿದ್ದ ಕಾರ್ಮಿಕ, ಪಿಡಿಆರ್ ಮೆಷಿನ್‌ ಇಟ್ಟುಕೊಂಡು ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸಿದವರಿಂದ ದಂಡ ವಸೂಲಿಗೆ ಮಾಡುತ್ತಿದ್ದ ಎನ್ನಲಾಗಿದೆ.

ಈ ವೇಳೆ ಬೈಕ್ ಸವಾರ ಕಿರಣ್ ಎಂಬವರಿಗೆ ₹ 1600 ದಂಡ ಕಟ್ಟುವಂತೆ ಕಾರ್ಮಿಕ ಹೇಳಿದ್ದಾನೆ. ಆಗ ಕಿರಣ್‌, ₹ 2 ಸಾವಿರ ಮುಖಬೆಲೆ ನೋಟು ನೀಡಿದ್ದು, ಕಾರ್ಮಿಕ ₹1 ಸಾವಿರ ವಾಪಸ್ ಕೊಟ್ಟಿದ್ದ. ದಂಡ ಕಟ್ಟಿಸಿಕೊಂಡಿರುವ ಬಗ್ಗೆ ರಸೀದಿ ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಅಲ್ಲೇ ಇದ್ದ ನಾಲ್ವರು ಕಾರ್ಮಿಕರು ಕಿರಣ್‌ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಕಿರಣ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು