ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗೆ ಪಾದಪೂಜೆ | ಪ್ರಜ್ಞಾವಂತರಲ್ಲಿ ಕಣ್ಣೀರು: ಮೂಡ್ನಾಕಾಡು ಚಿನ್ನಸ್ವಾಮಿ

Published 18 ನವೆಂಬರ್ 2023, 16:17 IST
Last Updated 18 ನವೆಂಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಪಾದಪೂಜೆ ಮಾಡಿ ಸ್ವಾಗತಿಸಿದ ದೃಶ್ಯವು ಪ್ರಜ್ಞಾವಂತರಲ್ಲಿ ಕಣ್ಣೀರು ತರಿಸಿತು’ ಎಂದು ಸಾಹಿತಿ ಮೂಡ್ನಾಕಾಡು ಚಿನ್ನಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸಮುದಾಯ ಕರ್ನಾಟಕದ 8ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಹಾಗೂ ಘನತೆಯ ಬದುಕು–ಸಾಂಸ್ಕೃತಿಕ ಮಧ್ಯಪ್ರವೇಶ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರು ಜೈಲಿನಿಂದ ಬಿಡುಗಡೆ ಆಗುವ ಸಂದರ್ಭಗಳಲ್ಲಿ ಮಂತ್ರಿಗಳೇ ಖುದ್ದು ಹಾಜರಿರುತ್ತಾರೆ. ಇದು ದುರಂತ’ ಎಂದು ಹೇಳಿದರು.

‘ದೇಶದಲ್ಲಿ ಘನತೆಯ ಬದುಕು ಸಾಧ್ಯವಾಗುತ್ತಿಲ್ಲ. ಭಾರತ ಶ್ರೇಷ್ಠ ಸಂಸ್ಕೃತಿ ಹೊಂದಿದೆ ಎಂದು ವಿದೇಶದಲ್ಲಿ ಭಾಷಣ ಮಾಡುವವರು ಇದ್ಧಾರೆ. ಇದು ನಿಜವಾದ ಆತ್ಮವಂಚನೆ’ ಎಂದರು.

ಚಲನಚಿತ್ರ ನಿರ್ದೇಶಕ ಬಿ.ಸುರೇಶ್‌ ಮಾತನಾಡಿ, ‘ರಾಜ್ಯದಲ್ಲಿ ಸರ್ಕಾರ ಬದಲಾದರೂ ನಿಲುವುಗಳು ಬದಲಾವಣೆ ಕಂಡಿಲ್ಲ. ಹೋರಾಟಗಾರರು ಸಣ್ಣ ಸಭೆ ನಡೆಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಪೊಲೀಸರ ಕಣ್ಣುಗಳು ಯಾವಾಗಲೂ ಹೋರಾಟಗಾರರ ಮೇಲೆ ಇರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಘನತೆಯ ಬದುಕಿಗಾಗಿ ಹೋರಾಡುವ ಪರಿಸ್ಥಿತಿಯಿದೆ’ ಎಂದು ಹೇಳಿದರು.

‘ಖಾಸಗಿ ಸಂಸ್ಥೆಗಳು ಅಧ್ಯಯನ ನಡೆಸಿ, ಹಸಿವಿನಿಂದ ಬಳಲುತ್ತಿರುವವರ ಅಂಕಿಅಂಶ ನೀಡಿದರೆ ಕೇಂದ್ರ ಸರ್ಕಾರ ಹಸಿವಿನಿಂದ ಯಾರೂ ಬಳಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ವೈದ್ಯಕೀಯ, ಅಪಘಾತ ಹಾಗೂ ಬೆಳೆ ವಿಮೆಯಲ್ಲಿ ಶೇ 4ರಷ್ಟು ಪರಿಹಾರ ಲಭಿಸುತ್ತಿಲ್ಲ. ತಮ್ಮ ಪಾಲಿನ ಹಕ್ಕು ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಸಮುದಾಯ ಕರ್ನಾಟಕ ಖಜಾಂಚಿ ಎನ್‌.ಕೆ.ವಸಂತರಾಜ್‌ ಮಾತನಾಡಿ, ‘ಬಹುತ್ವದ ಮೇಲೆ ನಿರಂತರ ದಾಳಿಯಾಗುತ್ತಿದೆ. ರಂಗಭೂಮಿ ಕ್ಷೇತ್ರವನ್ನೂ ಕೋಮುವಾದ ಬಿಟ್ಟಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಸಾಹಿತಿ ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜೆ.ಲೋಕೇಶ್‌, ಶಶಿಕಾಂತ ಯಡಹಳ್ಳಿ, ಗೌರಿ ದತ್ತು ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT