ಭಾನುವಾರ, ಜುಲೈ 25, 2021
24 °C
ಪೊಲೀಸರಿಂದ ತನಿಖೆ ತೀವ್ರ

ಉಸಿರುಗಟ್ಟಿಸಿ ವೃದ್ಧ ದಂಪತಿ ಕೊಲೆ: ಮಗ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ರಂಗನಾಥಪುರದ ಮಾದೇಶ್ವರ ದೇವಸ್ಥಾನದ ಬಳಿ ನಡೆದಿದೆ.

ನರಸಿಂಹ ರಾಜು (70) ಮತ್ತು ಸರಸ್ವತಿ (60) ಕೊಲೆಯಾದವರು. ಬಾಡಿಗೆ ಮನೆಯಲ್ಲಿ ಮೊದಲ ಮಹಡಿಯಲ್ಲಿ ಮಗ ಮತ್ತು ಸೊಸೆ ಜೊತೆ ದಂಪತಿ ವಾಸವಾಗಿದ್ದರು. ಬುಧವಾರ ಬೆಳಿಗ್ಗೆ 8.30ರ ಸುಮಾರಿಗೆ ಮನೆ ಕೆಲಸದವಳು ಬಂದಾಗ ಪ್ರಕರಣ ಬಯಲಾಗಿದೆ.

ಲೆಕ್ಕಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಮಗ ಸಂತೋಷ್ ಕೂಡ ಪೋಷಕರ ಜೊತೆಗೆ ವಾಸವಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ಸ್ವಂತ ಕಚೇರಿ ಹೊಂದಿದ್ದರು. ಸೊಸೆ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದಾರೆ. ಸಂತೋಷ್‌ ನಾಪತ್ತೆಯಾಗಿದ್ದು, ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಹೀಗಾಗಿ, ಅವರ ಬಗ್ಗೆ ಶಂಕೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದರು.

ಕೆಲಸದವಳು ಬಂದಾಗ ಮನೆಯ ಮುಂದಿನ ಬಾಗಿಲು ಹಾಕಿದ್ದರೂ ಒಳಗಿನಿಂದ ಚಿಲಕ ಸಿಕ್ಕಿಸಿರಲಿಲ್ಲ. ಹೊರಗಿನಿಂದ ಕೂಗಿದರೂ ಯಾರೂ ಹೊರಗೆ ಬಂದಿರಲಿಲ್ಲ. ಹೀಗಾಗಿ, ಬಾಗಿಲು ತಳ್ಳಿಕೊಂಡು ಒಳಗೆ ಹೋಗಿ ನೋಡಿದಾಗ ದಂಪತಿಯ ಮೃತದೇಹ ಕಾಣಿಸಿತ್ತು. ತಕ್ಷಣ ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೈಸೂರಿನವರಾದ ನರಸಿಂಹರಾಜು ಈ ಹಿಂದೆ ಮದುವೆ ದಲ್ಲಾಳಿಯಾಗಿದ್ದರು. ಸರಸ್ವತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಇಬ್ಬರೂ ಮನೆಯಲ್ಲೇ ಇದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

‘ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ’ ಪೊಲೀಸರು ಹೇಳಿದರು.

ಕಣ್ಣೀರಿಟ್ಟಿದ್ದ ತಾಯಿ?
‘ಘಟನೆಗೆ ಸಂಬಂಧಿಸಿದಂತೆ ದಂಪತಿ ನೆಲೆಸಿದ್ದ ಮನೆಯ ಸುತ್ತಮುತ್ತಲಿನ ನಿವಾಸಿಗಳಿಂದ ಹೇಳಿಕೆ ಪಡೆಯಲಾಗಿದೆ. ಎರಡು ತಿಂಗಳ ಹಿಂದೆ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ವೇಳೆ, ಸಂತೋಷ್ ತನ್ನ ತಾಯಿ ಸರಸ್ವತಿ ಮೇಲೆ ಹಲ್ಲೆ ಮಾಡಿದ್ದ. ಈ ವಿಷಯವನ್ನು ಸರಸ್ವತಿ ಸ್ಥಳೀಯರ ಮುಂದೆ ಹೇಳಿ ಕಣ್ಣೀರಿಟ್ಟಿದ್ದರು ಎಂದು ಗೊತ್ತಾಗಿದೆ. ಸಂತೋಷ್ ಪತ್ತೆಯಾದ ಬಳಿಕ ಯಾವ ಕಾರಣಕ್ಕೆ ಗಲಾಟೆ ನಡೆದಿತ್ತು ಎಂಬುದು ಗೊತ್ತಾಗಲಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು