ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಪ್ರಕರಣ: ದರ್ಶನ್‌ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

ಮುಂದಿನ ವಾರ ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷ್ಯಾಧಾರ ಸಲ್ಲಿಕೆ: ಎಸ್‌ಪಿಪಿ
Published : 13 ಸೆಪ್ಟೆಂಬರ್ 2024, 14:32 IST
Last Updated : 13 ಸೆಪ್ಟೆಂಬರ್ 2024, 14:32 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮಂಗಳವಾರದವರೆಗೆ (ಸೆಪ್ಟೆಂಬರ್‌ 17) ವಿಸ್ತರಿಸಿ, 24ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿತು.

ಬಳ್ಳಾರಿ ಕೇಂದ್ರ ಕಾರಾಗೃಹದಿಂದ ದರ್ಶನ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪವಿತ್ರಾಗೌಡ ಹಾಗೂ ದೀಪಕ್, ತುಮಕೂರು ಜೈಲಿನಿಂದ ಕಾರ್ತಿಕ್‌, ನಿಖಿಲ್‌ ನಾಯಕ್‌, ಬೆಳಗಾವಿ ಜೈಲಿನಿಂದ ಪ್ರದೂಷ್‌ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹದಲ್ಲಿರುವ 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷ್ಯಾಧಾರ ಒದಗಿಸಿಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 164ರ ಅಡಿ ಹೇಳಿಕೆ ನೀಡಿದ್ದವರ ಪ್ರಮಾಣೀಕೃತ ದಾಖಲಾತಿ ನೀಡಿಲ್ಲ’ ಎಂದು ಆಕ್ಷೇಪಿಸಿದರು.

‘ಮುಂದಿನ ವಾರ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಸಲ್ಲಿಸಲಿದ್ದಾರೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.

ತಾಂತ್ರಿಕ ಸಾಕ್ಷ್ಯಾಧಾರ ಸಲ್ಲಿಸಿದ ನಂತರ ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡುವಂತೆ ಆರೋಪಿಗಳ ಪರ ವಕೀಲರು ಕೋರಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆ ಮುಂದೂಡಿ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT