ಭಾನುವಾರ, ಸೆಪ್ಟೆಂಬರ್ 19, 2021
24 °C

ಕೊಲೆ ಪ್ರಕರಣ: ಗುಂಡು ಹಾರಿಸಿ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಹಾಗೂ ಆಟೊ ಚಾಲಕರೊಬ್ಬರ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಗುಂಡು ಹಾರಿಸಿ ಬುಧವಾರ ಬಂಧಿಸಿದ್ದಾರೆ.

ಕೋಲಾರದ ಕವಿರಾಜ್ (45) ಹಾಗೂ ಆನೇಕಲ್‌ನ ಅಂಬರೀಷ್ (35) ಗುಂಡೇಟು ತಿಂದ ಆರೋಪಿಗಳು. 

ಕಳೆದ ನವೆಂಬರ್‌ನಲ್ಲಿ ಕೋಲಾರದಲ್ಲಿ ನಡೆದಿದ್ದ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಆರೋಪಿ ಕವಿರಾಜ್‌ ಸೇರಿದಂತೆ ಹಲವರು ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರ ಕವಿರಾಜ್ ಮತ್ತು ಅಂಬರೀಷ್ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಅಪಹರಿಸಲು ಸಂಚು ರೂಪಿಸಿದ್ದರು. 

ಇಂದಿರಾನಗರದ ಆಟೊ ಚಾಲಕ ವಿಜಯ್ ಕುಮಾರ್ ಎಂಬುವರನ್ನು ಜೂನ್ ಮೊದಲ ವಾರದಲ್ಲಿ ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡುವುದು ತಡವಾದ ಕಾರಣ ವಿಜಯ್‌ ಅವರನ್ನು ಕೊಲೆ ಮಾಡಿ, ಮೃತದೇಹವನ್ನು ಹೊಸೂರು ಬಳಿ ಹೂತು ಹಾಕಿದ್ದರು.

ಈ ಪ್ರಕರಣದ ಬೆನ್ನ ಹತ್ತಿದ್ದ ಪೊಲೀಸರಿಗೆ ಕವಿರಾಜ್ ಮತ್ತು ಆತನ ತಂಡ ಈ ಕೃತ್ಯ ಎಸಗಿದ್ದು ಗೊತ್ತಾಯಿತು. ಆರೋಪಿಗಳು ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು.

‘ಸ್ಥಳಕ್ಕೆ ತೆರಳಿ ಬಂಧಿಸಲು ಮುಂದಾದ ಪೊಲೀಸರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೂ ಗುಂಡು ಹಾರಿಸಲಾಯಿತು. ಬಳಿಕ ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ನಡೆಯಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು