ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಮೇಲೆ ಕಣ್ಣು ಹಾಕಿದ್ದಕ್ಕೆ ಕೊಂದ; ವರ್ಷದ ಬಳಿಕ ಸಿಕ್ಕಿಬಿದ್ದ

ಸಹಜ ಸಾವಲ್ಲ, ಕೊಲೆ; ಮರಣೋತ್ತರ ಪರೀಕ್ಷೆ ವರದಿ ನೀಡಿದ್ದ ಸುಳಿವು
Last Updated 18 ಫೆಬ್ರುವರಿ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಪತ್ನಿ ಮೇಲೆ ಕಣ್ಣು ಹಾಕಿದ್ದನೆಂಬ ಕಾರಣಕ್ಕೆ ಸ್ನೇಹಿತ ವೆಂಕಟೇಶ್‌ನನ್ನು (45) ಹತ್ಯೆ ಮಾಡಿದ್ದ ಆರೋ‍ಪಿ ಹರೀಶ್, ಮರಣೋತ್ತರ ಪರೀಕ್ಷೆ ನೀಡಿದ್ದ ಸುಳಿವಿನಿಂದಾಗಿ ವರ್ಷದ ಬಳಿಕ ಬ್ಯಾಡರಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಕೀಟನಾಶಕ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ವೆಂಕಟೇಶ್ 2020ರ ಫೆ. 14ರಂದು ಮೃತಪಟ್ಟಿದ್ದರು. ಮೃತದೇಹದ ಮೇಲೆ ಯಾವುದೇ ಗಾಯಗಳು ಇರಲಿಲ್ಲ. ಸ್ಥಳದಲ್ಲಿ ಯಾವುದೇ ರಕ್ತದ ಕಲೆಯೂ ಕಂಡಿರಲಿಲ್ಲ. ಹೀಗಾಗಿ, ಇದೊಂದು ಅಸಹಜ ಸಾವೆಂದು ಭಾವಿಸಲಾಗಿತ್ತು. ಇತ್ತೀಚೆಗೆ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಇದೊಂದು ಕೊಲೆ ಎಂಬುದು ಖಾತ್ರಿಯಾಗಿದೆ. ಆರೋಪಿ ಹರೀಶ್‌ನನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಬ್ಯಾಡರಹಳ್ಳಿ ಪೊಲೀಸ್ ಮೂಲಗಳು ಹೇಳಿವೆ.

‘ಮೃತ ವೆಂಕಟೇಶ್ ಹಾಗೂ ಆರೋಪಿ ಹರೀಶ್ ಸ್ನೇಹಿತರಾಗಿದ್ದರು. ಪರಸ್ಪರ ಮನೆಗೂ ಬಂದು ಹೋಗುವುದು ಮಾಡುತ್ತಿದ್ದರು. ಹರೀಶ್ ಪತ್ನಿ ಜೊತೆ ವೆಂಕಟೇಶ್ ಹೆಚ್ಚು ಮಾತನಾಡಲಾರಂಭಿಸಿದ್ದರು. ಅದನ್ನು ನೋಡಿದ್ದ ಹರೀಶ್, ಹಲವು ಬಾರಿ ಎಚ್ಚರಿಕೆ ನೀಡಿದ್ದ. ಮದ್ಯದ ಪಾರ್ಟಿ ವೇಳೆ ಇಬ್ಬರ ನಡುವೆ ಗಲಾಟೆಯೂ ಆಗಿತ್ತು.’

‘ಬುದ್ದಿವಾದ ಹೇಳಿದರೂ ಸುಮ್ಮನಾಗದ ವೆಂಕಟೇಶ್, ‘ಪತ್ನಿಯನ್ನು ಮಾತನಾಡಿಸುತ್ತೇನೆ. ಏನು ಮಾಡುತ್ತೀಯಾ ನೋಡುತ್ತೇನೆ’ ಎಂದು ಬೆದರಿಕೆ ಸಹ ಹಾಕಿದ್ದರು. ಅದರಿಂದಾಗಿ ಸಿಟ್ಟಾಗಿದ್ದ ಹರೀಶ್, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿದ್ದ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿ ಆರೋಪಿ ಪರಾರಿಯಾಗಿದ್ದ.’

‘ಆರಂಭದಲ್ಲಿ ಸ್ಥಳಕ್ಕೆ ಹೋಗಿದ್ದ ಪೊಲೀಸರು, ವಿಪರೀತ ಮದ್ಯ ಕುಡಿದು ಅಥವಾ ಬೇರೆ ಕಾರಣಕ್ಕೆ ಸತ್ತಿರಬಹುದೆಂದು ತಿಳಿದಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಪತ್ನಿಗಾಗಿ ಕೊಲೆ: ‘ಪುರಾವೆ ಸಂಗ್ರಹಿಸಿ ಹರೀಶ್‌ನನ್ನು ಬಂಧಿಸಲಾಯಿತು. ತನ್ನ ಪತ್ನಿ ಜೊತೆ ವೆಂಕಟೇಶ್ ಸಲುಗೆ ಬೆಳೆಸುತ್ತಿದ್ದ. ಅದನ್ನು ಸಹಿಸಲಾಗದೇ ಪತ್ನಿಗಾಗಿ ಆತನನ್ನು ಕೊಂದಿರುವುದಾಗಿ ಆರೋಪಿ ಹರೀಶ್ ಹೇಳುತ್ತಿದ್ದಾನೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT