ಸೋಮವಾರ, ಅಕ್ಟೋಬರ್ 18, 2021
23 °C

ತಾಯಿ ಜೊತೆಗಿನ ಸಲುಗೆ ಪ್ರಶ್ನಿಸಿದ್ದಕ್ಕೆ ಮಗನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಲಸೂರು ಠಾಣೆಯ ವ್ಯಾಪ್ತಿಯಲ್ಲಿ ನಂದು (17) ಎಂಬಾತನನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಶಕ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮರ್ಫಿಟೌನ್‌ ಮನೆಯೊಂದರಲ್ಲಿ ಮಂಗಳವಾರ ಕೊಲೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಶಕ್ತಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರುತ್ತೇವೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶಕ್ತಿ, ಮೃತ ನಂದುನ ತಾಯಿ ಜೊತೆ ಸಲುಗೆ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆಗಾಗ ಆಗ ಮನೆಗೂ ಬಂದು ಹೋಗುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಂದು, ಮನೆಗೆ ಬಾರದಂತ ಎಚ್ಚರಿಕೆ ನೀಡಿದ್ದ. ಇದರಿಂದ ಆರೋಪಿ ಶಕ್ತಿ ಸಿಟ್ಟಾಗಿದ್ದ.’

‘ಮಂಗಳವಾರವೂ ಮನೆಗೆ ಬಂದಿದ್ದ ಶಕ್ತಿ, ತಾಯಿ ಜೊತೆ ಸಲುಗೆಯಿಂದ ವರ್ತಿಸಿದ್ದ. ಇದನ್ನು ಖಂಡಿಸಿದ್ದ ನಂದು, ಆರೋಪಿಯನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದ.’

‘ಇಬ್ಬರ ನಡುವೆಯೂ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಶಕ್ತಿ, ಮನೆಯಲ್ಲಿದ್ದ ಚಾಕುವಿನಿಂದ ನಂದುಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ನಂದುನನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟ’ ಎಂದೂ ಪೊಲೀಸರು ತಿಳಿಸಿದರು.

‘ಮಹಿಳೆ ಜೊತೆಗಿನ ಸಲುಗೆಗೆ ನಂದು ಪದೇ ಪದೇ ಅಡ್ಡಿಪಡಿಸಿದ್ದ. ಹೀಗಾಗಿ, ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು