ಬುಧವಾರ, ಫೆಬ್ರವರಿ 19, 2020
25 °C
11ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ ಸಂಪನ್ನ

‌ವಿಶ್ವ ಮೋಹನ್ ಭಟ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಸಾಮಗಾನ ಸಭಾವು 'ವಸಂತ ಪಂಚಮಿ' ಶೀರ್ಷಿಕೆಯಡಿ ಆಯೋಜಿಸಿದ್ದ 11ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ ಸಮಾರಂಭದಲ್ಲಿ ಪಂಡಿತ್‌ ವಿಶ್ವಮೋಹನ್ ಭಟ್ ಅವರಿಗೆ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಈ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶಸ್ತಿ ಪ್ರದಾನ ಮಾಡಿ, ‘ಸಂಗೀತದಿಂದ ಚಿಂತೆ, ನೋವು ಹಾಗೂ ಜೀವನದ ಎಲ್ಲ ಕಷ್ಟಗಳನ್ನೂ ಮರೆಯಬಹುದು. ಸಮಾಜದಲ್ಲಿ ಅನೇಕ ರೀತಿಯ ತಾರತಮ್ಯವಿದ್ದರೂ ಕಲಾ ಪ್ರಪಂಚದಲ್ಲಿ ಮಾತ್ರ ಬೇಧ ಭಾವವಿಲ್ಲ’ ಎಂದರು.

‘ಶ್ರೀಮಂತ ಭಾರತೀಯ ಸಂಗೀತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ. ಆದರೆ, ಇಂದಿನ ಶಿಕ್ಷಣ ಪದ್ಧತಿ ಹಾಗೂ ಪ್ರತಿಭೆಯ ಕಡೆಗಣನೆ ಈ ಆಶಯಕ್ಕೆ ತೊಡಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಐಟಿ ಸಿಟಿ ಎಂಬ ಹಿರಿಮೆಗೆ ಭಾಜನರಾಗಿರುವ ಬೆಂಗಳೂರು ದೇಶಕ್ಕೇ ಭಾರತೀಯ ಸಂಗೀತದ ರಾಜಧಾನಿಯಾಗಿ ಬೆಳೆಯಬೇಕು’ ಎಂದರು. 

ಸಂಗೀತೋತ್ಸವದ ಅಧ್ಯಕ್ಷ ಎನ್‌.ಎಸ್.ಕೃಷ್ಣಮೂರ್ತಿ, ‘ಯುವಜನತೆಯ ಮೇಲೆ ಪಾಶ್ಚಿಮಾತ್ಯ ಸಂಗೀತದ ದಾಳಿ ನಿರಂತರವಾಗಿ ನಡೆಯುತ್ತಿದೆ. ಕಾಲ ಬದಲಾದಂತೆ ಜನರ ಅಭಿರುಚಿಗಳಲ್ಲೂ ಬದಲಾವಣೆ ಆಗುವುದು ಸಹಜ. ಆದರೆ, ಮೂಲ ಸ್ವರೂಪಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಕರ್ನಾಟಕ ಸಂಗೀತಕ್ಕೆ ದೈವಿಕ ಹಿನ್ನೆಲೆಯಿದೆ’ ಎಂದು ತಿಳಿಸಿದರು. 

ಕಲಾವಿದರು ಶ್ರೀಗಂಧದಂತೆ: ಭಾರತೀಯ ಸಾಮಗಾನ ಸಭಾದ ಸಂಸ್ಥಾಪನಾ ಅಧ್ಯಕ್ಷ ಆರ್‌.ಆರ್.ರವಿಶಂಕರ್, ‘ವೈದ್ಯರು, ಎಂಜಿನಿಯರ್‌ಗಳನ್ನು  ಸುಲಭವಾಗಿ ತಯಾರಿಸಬಹುದು. ಆದರೆ, ಕಲಾವಿದರನ್ನು ಸೃಷ್ಟಿಸುವುದು ಅಷ್ಟು ಸುಲಭವಲ್ಲ.‌ ಲಕ್ಷಾಂತರ ಮಂದಿ ಸಂಗೀತವನ್ನು ಕಲಿತರೂ ಕೆಲವರು ಮಾತ್ರ ಗಂಧರ್ವರಾಗುತ್ತಾರೆ. ಸಂಗೀತ ಕಲಾವಿದರು ಶ್ರೀಗಂಧಕ್ಕೆ ಸಮನಾಗಿದ್ದು, ಸಾಧಕರನ್ನು ಗುರುತಿಸಬೇಕು ಎಂದರು.

ಕಲಾವಿದರಾದ ರಂಜನಿ ಮತ್ತು ಗಾಯತ್ರಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ಅವರಿಗೆ ಎಲ್.ರಾಮಕೃಷ್ಣ (ಪಿಟೀಲು), ಗಿರಿಧರ್ (ಮೃದಂಗ) ಹಾಗೂ ಅನಿರುದ್ಧ ಆತ್ರೇಯ (ಖಂಜೀರ) ಸಾಥ್ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು