ಶುಕ್ರವಾರ, ಜುಲೈ 1, 2022
21 °C
ಸತ್ಯೇಶ್‌ ಅವರ ‘ಸ್ಟಾರ್ಟ್‌ಅಪ್‌ ನೀವೂ ಕಟ್ಟಬಹುದು’ ಪುಸ್ತಕ ಬಿಡುಗಡೆ

ಕನಸಷ್ಟೇ ಸಾಲದು, ಇರಲಿ ಛಲ: ಕ್ಯಾಪ್ಟನ್‌ ಗೋಪಿನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾಪ್ಟನ್ ಗೋಪಿನಾಥ್

ಬೆಂಗಳೂರು: ‘ನವೋದ್ಯಮ ಸ್ಥಾಪಿಸಬೇಕು ಎಂಬ ದೊಡ್ಡ ಕನಸು ಇರುತ್ತದೆ. ಪ್ರತಿಭೆಯೂ ಜೊತೆಗಿರುತ್ತದೆ. ಇವೆರಡೂ ಇದ್ದೂ ಛಲ ಇರದಿದ್ದರೆ ಪ್ರಯೋಜನವಿಲ್ಲ. ಪ್ರತಿಭೆಗಿಂತ ಮುಖ್ಯವಾದದ್ದು ಛಲ’ ಎಂದು ಉದ್ಯಮಿ ಕ್ಯಾಪ್ಟನ್‌ ಗೋಪಿನಾಥ್ ಹೇಳಿದರು.

ಸತ್ಯೇಶ್‌ ಬೆಳ್ಳೂರ್‌ ಅವರ ‘ಸ್ಟಾರ್ಟ್‌ ಅಪ್‌–ನೀವೂ ಕಟ್ಟಬಹುದು’ ಕೃತಿಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸಾಹಸದ ಕನಸೊಂದನ್ನು ಕಂಡು, ಅದನ್ನು ನನಸಾಗಿಸುವ ಕಾರ್ಯಕ್ಕೆ ಧುಮುಕಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ವ್ಯವಸ್ಥೆ ಮಾಡಿಕೊಂಡ ನಂತರವೇ ಉದ್ಯಮ ಪ್ರಾರಂಭಿಸಬೇಕು ಎಂದು ಯೋಚಿಸುವವರು ಅನೇಕರಿದ್ದಾರೆ. ಯಾವುದೇ ಉದ್ಯಮ ಸ್ಥಾಪಿಸುವ ಮೊದಲು ಕೊರತೆಗಳು ಇದ್ದೇ ಇರುತ್ತವೆ. ಯಾವ ವ್ಯವಸ್ಥೆ ಇರದಿದ್ದರೂ ಧೈರ್ಯ ಮಾಡಿ ಮುನ್ನುಗ್ಗಬೇಕು. ಎಲ್ಲ ವ್ಯವಸ್ಥೆಯಾಗಲಿ ಎಂದು ಕಾಯುತ್ತಾ ಕುಳಿತರೆ ಉದ್ಯಮಗಳನ್ನು ಪ್ರಾರಂಭಿಸಲು ಆಗುವುದೇ ಇಲ್ಲ’ ಎಂದೂ ಅವರು ಹೇಳಿದರು.

‘ನಾಳೆಯೂ ಸೂರ್ಯ ಹುಟ್ಟುತ್ತಾನೆ. ಉತ್ತಮ ಮಳೆಯೂ ಆಗುತ್ತದೆ ಎಂಬ ನಂಬಿಕೆಯಿಂದ ರೈತ ನಿತ್ಯ ಕೃಷಿ ಕಾರ್ಯದಲ್ಲಿ ತೊಡಗುತ್ತಾನೆ. ಮಳೆ ಇಲ್ಲದೆ ಎಷ್ಟೇ ನಷ್ಟ ಅನುಭವಿಸಿದ್ದರೂ ನಾಳೆ ಮಳೆ ಬೀಳುತ್ತದೆ, ಬೆಳೆ ಚೆನ್ನಾಗಿ ಬರುತ್ತದೆ ಎಂಬ ದೃಢವಿಶ್ವಾಸ ಅವನಲ್ಲಿರುತ್ತದೆ. ಹೊಸ ಉದ್ಯಮ ಪ್ರಾರಂಭಿಸುವವರಲ್ಲಿಯೂ ಇಂತಹ ಮನೋಸ್ಥೈರ್ಯ ಇರಬೇಕು’ ಎಂದರು.

‘ನೀವೇ ಬೇರೆ ಮತ್ತು ನಿಮ್ಮ ದೃಷ್ಟಿಕೋನವೇ ಬೇರೆ ಆಗಿರಬಾರದು. ನೀವು ಮತ್ತು ನಿಮ್ಮ ಗುರಿ ಒಂದಕ್ಕೊಂದು ಪೂರಕವಾಗಿರಬೇಕು. ವಿಫಲವಾದರೂ ಎದ್ದು ನಿಲ್ಲುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಲೇಖಕ ಸತ್ಯೇಶ್‌ ಬೆಳ್ಳೂರ್, ‘ಉದ್ಯಮ ಪ್ರಾರಂಭಿಸಲು ಧ್ಯೇಯಾತ್ಮಕ ಹೊಳಹು ಇರಬೇಕು. ಜೀವನವೆಲ್ಲ ಇನ್ನೊಬ್ಬರಿಗಾಗಿ ದುಡಿಯುವುದೇ ಆಯಿತು. ನಾವೂ ಸ್ವಂತ ಉದ್ಯಮ ಆರಂಭಿಸಬೇಕು ಎಂಬುವರಿಗೆ ಈ ಪುಸ್ತಕದಲ್ಲಿ ಹಲವು ದೃಷ್ಟಾಂತಗಳು ಸಿಗುತ್ತವೆ. ಬಂಡವಾಳ ಹೇಗೆ ಜೋಡಿಸಿಕೊಳ್ಳಬೇಕು, ವ್ಯವಹಾರ ಕೌಶಲ ಹೇಗಿರಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪುಸ್ತಕ ಒಳಗೊಂಡಿದೆ’ ಎಂದರು. 

ಮೈಲ್ಯಾಂಗ್‌ ಪ್ರಕಾಶನವು ಈ ಕೃತಿಯ ಇ–ಬುಕ್, ಆಡಿಯೊ ಬುಕ್ ಮತ್ತು ಮುದ್ರಿತ ಆವೃತ್ತಿಯನ್ನು ಹೊರತಂದಿದೆ. ಪುಸ್ತಕದ ಮೂರೂ ಆವೃತ್ತಿಯನ್ನು mylang.in ಮೂಲಕ ಕೊಳ್ಳಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು