ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ‘ನಾಗಶ್ರೀ ಬುಕ್‌ ಹೌಸ್‌’ ಇತಿಹಾಸಕ್ಕೆ

Published 9 ಜೂನ್ 2024, 4:01 IST
Last Updated 9 ಜೂನ್ 2024, 4:01 IST
ಅಕ್ಷರ ಗಾತ್ರ

ಬೆಂಗಳೂರು: ಸುಮಾರು ಐದು ದಶಕಗಳಿಂದ ಬೆಂಗಳೂರು ದಕ್ಷಿಣದಲ್ಲಿ ಅಕ್ಷರ ಹಾಗೂ ಜ್ಞಾನದ ಹಸಿವನ್ನು ತಣಿಸಿದ ‘ನಾಗಶ್ರೀ ಬುಕ್‌ ಹೌಸ್‌’ ಇತಿಹಾಸದ ಪುಟ ಸೇರಿದೆ.

ಜಯನಗರದ ನಾಲ್ಕನೇ ಬ್ಲಾಕ್‌ ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 1976ರಲ್ಲಿ ಆರಂಭಗೊಂಡ ಈ ಮಳಿಗೆಯಲ್ಲಿ ಶನಿವಾರ ಕೊನೆಯ ದಿನದ ವ್ಯಾಪಾರ ನಡೆಯಿತು.

ಸಾಹಿತ್ಯಾಸಕ್ತರು ಹಾಗೂ ಪುಸ್ತಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಪುಸ್ತಕಗಳನ್ನು ಖರೀದಿಸಿದರು. ಈ ವೇಳೆ ಹಲವರು ಭಾವುಕರಾಗಿ ದ್ದರು. ಪುಸ್ತಕಗಳ ದಾಸ್ತಾನು ಖಾಲಿ ಮಾಡಲು ಇಂಗ್ಲಿಷ್ ಪುಸ್ತಕಗಳ ಮೇಲೆ ಶೇ 50 ರಷ್ಟು ಹಾಗೂ ಕನ್ನಡ ಪುಸ್ತಕಗಳ ಮೇಲೆ ಶೇ 30 ರಷ್ಟು ರಿಯಾಯಿತಿ ನೀಡಲಾಗಿತ್ತು. ಇದರಿಂದಾಗಿ ಕೊನೆಯ ದಿನ ಹೆಚ್ಚಿನ ವಹಿವಾಟು ನಡೆಯಿತು. 48 ವರ್ಷಗಳ ಮಳಿಗೆಗೆ ಬೀಗ ಹಾಕುವ ಕ್ಷಣಕ್ಕೆ ಹಲವರು ಸಾಕ್ಷಿಯಾಗಿದ್ದರು. ಭಾನುವಾರದಿಂದ ಈ ಮಳಿಗೆ ಕಾರ್ಯ ನಿರ್ವಹಿಸದಿರುವುದು ಸಾಹಿತ್ಯಾಸಕ್ತರ ಬೇಸರಕ್ಕೂ ಕಾರಣವಾಯಿತು.

ಈ ಮಳಿಗೆಯನ್ನು ವೆಂಕಟೇಶ್ ಅವರು ಮುನ್ನಡೆಸಿಕೊಂಡು ಬಂದಿದ್ದರು. ಅವರ ಜತೆಗೆ ಸಹೋದರ ಗುರುಪ್ರಸಾದ್ ಹಾಗೂ ಸೋದರ ಮಾವ ಶ್ರೀಕಂಠಯ್ಯ ಸೇರಿ ಈ ಮಳಿಗೆ ಪ್ರಾರಂಭಿಸಿದ್ದರು. ಇವರಲ್ಲಿ ಶ್ರೀಕಂಠಯ್ಯ ಒಂದೆರಡು ವರ್ಷ ಕೆಲಸ ಮಾಡಿ, ಈ ಸಹೋದರರಿಗೆ ಬಿಟ್ಟುಕೊಟ್ಟು ಪೀಣ್ಯದಲ್ಲಿರುವ ಮುದ್ರಣಾಲಯಕ್ಕೆ ತೆರಳಿದ್ದರು. ಕೆಲ ವರ್ಷಗಳ ಹಿಂದೆ ಗುರುಪ್ರಸಾದ್ ಅವರು ಈ ಉದ್ಯಮದಿಂದ ನಿವೃತ್ತಿ ಪಡೆದಿದ್ದರು. ಈಗ ಅವರ ಸಹೋದರ ವೆಂಕಟೇಶ್ ಅವರಿಗೆ 70 ವರ್ಷವಾಗಿದ್ದು, ಅವರು ಸಹ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ಕುಟುಂಬದ ಬೇರೆ ಸದಸ್ಯರಿಗೆ ಈ ಉದ್ಯಮದಲ್ಲಿ ಆಸಕ್ತಿ ಇರದಿರುವುದ ರಿಂದ ಈ ಮಳಿಗೆ ಮುಚ್ಚಲಾಗಿದೆ.

ಈ ಮಳಿಗೆಯು ಜಯನಗರದ ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿತ್ತು. ನಾಡಿನ ಹಲವು ಸಾಹಿತಿಗಳು ಹಾಗೂ ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಈ ಮಳಿಗೆಗೆ ಭೇಟಿ ನೀಡಿದ್ದರು. ಮಳಿಗೆಗೆ ಶನಿವಾರ ಬಂದಿದ್ದವರಲ್ಲಿ ಹಲವರು ತಮ್ಮ ಹಿಂದಿನ ಭೇಟಿಗಳನ್ನು ಸ್ಮರಿಸಿಕೊಂಡರು. 

ದಾಸ್ತಾನು ಬಹುತೇಕ ಖಾಲಿ

‘ಈ ಉದ್ಯಮ ಈಗ ಸಾಕು ಅನಿಸಿದೆ. ಇನ್ನು ಎಷ್ಟು ದಿನ ದುಡಿಯುವುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದು, ನಿವೃತ್ತಿ ಪಡೆಯುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆಯೇ ಈ ಬಗ್ಗೆ ಚಿಂತಿಸಲಾಗಿತ್ತು. ಕಾರಣಾಂತರಗಳಿಂದ ಬೇರೆಯವರಿಗೂ ಈ ಮಳಿಗೆಯನ್ನು ನೀಡಲು ಸಾಧ್ಯವಾಗಲಿಲ್ಲ’ ಎಂದು ವೆಂಕಟೇಶ್ ತಿಳಿಸಿದರು.

‘48 ವರ್ಷಗಳ ವ್ಯಾಪಾರಿಂದ ದೊಡ್ಡ ಗ್ರಾಹಕ ಕೂಟವನ್ನು ಹೊಂದಲಾಗಿತ್ತು. ರಿಯಾಯಿತಿ ದರದ ಮಾರಾಟದಿಂದ ದಾಸ್ತಾನು ಬಹುತೇಕ ಖಾಲಿಯಾಗಿದೆ. ಉಳಿದ ಪುಸ್ತಕಗಳನ್ನು ಏನು ಮಾಡಬೇಕೆಂದು ಯೋಚನೆ ಮಾಡಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT