ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಗೀತ ರೂಪಕ ನಿರ್ಮಾಣ: ಹಂಸಲೇಖ

Published 27 ಜನವರಿ 2024, 15:26 IST
Last Updated 27 ಜನವರಿ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಬಿಂಬಿಸುವ ಸಂಗೀತ ರೂಪಕವನ್ನು ನಿರ್ಮಿಸಲಾಗುವುದು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು. 

ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ ನಗರದಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಮರಣೆ ಹಾಗೂ ಕಿರು ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ, ಸಾಧನೆ ಹಾಗೂ ಕೊಡುಗೆಯ ಬಗ್ಗೆ ಸಂಗೀತ ರೂಪಕ ನಿರ್ಮಿಸಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಂಸಲೇಖ, ‘ಸಂಗೀತ ರೂಪಕವನ್ನು ರಚಿಸಿ, ಕನ್ನಡಿಗರಿಗೆ ಅರ್ಪಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಹಾಗೂ ಸಾಧನೆ ನಮಗೆಲ್ಲ ಆದರ್ಶಪ್ರಾಯ’ ಎಂದು ಹೇಳಿದರು. 

‘ಕನ್ನಡವನ್ನು ಕೇವಲ ಭಾಷೆಯೆಂದು ಪರಿಗಣಿಸದೆ, ಅದು ನಮ್ಮ ಹಕ್ಕಿನ ಪತ್ರವೆಂದು ತಿಳಿದುಕೊಳ್ಳಬೇಕು. ಈ ಹಕ್ಕು ನಮ್ಮೆಲ್ಲರಿಗೂ ದಕ್ಕುವಂತೆ ಆಗಬೇಕು. ಈ ಬಗ್ಗೆ ನಾವು ಸದಾ ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು. 

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ‘ಮುಂದಿನ ದಸರಾ ಸಂಭ್ರಮಾಚರಣೆ ಮೊದಲೇ ಮೈಸೂರು ಅರಮನೆ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಗೀತ ರೂಪಕವನ್ನು ಪ್ರದರ್ಶಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಹಾಗೂ ಅವರು ಈ ನಾಡಿಗೆ ನೀಡಿದ ಕೊಡುಗೆ ಅದ್ವಿತೀಯ. ಅವರು ಕರ್ನಾಟಕದ ಮನೆ-ಮನಗಳಲ್ಲೂ ಪ್ರಾತಃಸ್ಮರಣೀಯರಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಕೆ. ಸುಕುಮಾರ್, ‘ಮೈಸೂರು ಸಂಸ್ಥಾನದ ದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, 1902ರಲ್ಲಿ ನಮ್ಮ ಸಂಸ್ಥೆಗೆ ಎರಡೂವರೆ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ದೂರದೃಷ್ಟಿ ಹೊಂದಿದ್ದ ಅವರು ಕೈಗಾರಿಕೆ, ನೀರಾವರಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಿಗೆ ಅದ್ವಿತೀಯ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು. 

ಇದೇ ವೇಳೆ ಪ್ರಮೋದಾದೇವಿ ಒಡೆಯರ್ ಹಾಗೂ ಹಂಸಲೇಖ ಅವರಿಗೆ ಇನ್‌ಸ್ಟಿಟ್ಯೂಟ್‌ನ ಗೌರವ ಸದಸ್ಯತ್ವ ನೀಡಿ ಗೌರವಿಸಲಾಯಿತು. ಬಳಿಕ ಹಂಸಲೇಖ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತಾಗಿ ನಿರ್ದೇಶಿಸಿರುವ ಕಿರುಚಿತ್ರ ‘ಜಯಹೇ’ ಪ್ರದರ್ಶಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT