ಸೋಮವಾರ, ಜನವರಿ 27, 2020
27 °C
ಜಯನಗರದಲ್ಲಿ ಬಿಬಿಎಂಪಿ ಕಾರ್ಯಾಚರಣೆ

VIDEO: ಬೆಂಗಳೂರಿನಲ್ಲಿ ಕನ್ನಡ ಕಡೆಗಣಿಸಿದ 58 ನಾಮಫಲಕ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಗಡಿ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದ ಕಾರಣಕ್ಕಾಗಿ ಜಯನಗರ ಪ್ರದೇಶದಲ್ಲಿ ಬುಧವಾರ ಒಟ್ಟು 58 ಮಳಿಗೆಗಳ ನಾಮಫಲಕಗಳನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು.

‘ಈ ಪ್ರದೇಶದಲ್ಲಿ ಒಟ್ಟು 118 ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿರಲಿಲ್ಲ. ಅವರಿಗೆ ನ.2ರಂದೇ ನೋಟಿಸ್‌ ಜಾರಿ ಮಾಡಿ, 30 ದಿನಗಳ ಒಳಗೆ ನಾಮಫಲಕದಲ್ಲಿ ಶೇ 60ರಷ್ಟಾದರೂ ಕನ್ನಡ ಅಳವಡಿಸಿಕೊಂಡಿರಬೇಕು ಎಂದು ಸೂಚಿಸಿದ್ದೆವು. ಆದರೂ ಕೆಲವರು ನಾಮಫಲಕ ಬದಲಿಸಿರಲಿಲ್ಲ. ಡಿ.1ರಂದು ಮತ್ತೆ ನೋಟಿಸ್‌ ನೀಡಿದರೂ ಪ್ರತಿಕ್ರಿಯಿಸಿಲ್ಲ. ಹಾಗಾಗಿ ನಾಮಫಲಕಗಳನ್ನು ತೆರವುಗೊಳಿಸಿದ್ದೇವೆ’ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನೇಕ ಮಳಿಗೆಗಳ ಮಾಲೀಕರು ನಾಮಫಲಕ ಬದಲಾಯಿಸಲು ಕಾಲಾವಕಾಶ ಕೇಳಿದರು. ಆದರೆ, ಅವರಿಗೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದೇವೆ. ಹಾಗಾಗಿ ಅವರ ಕೋರಿಕೆ ಮನ್ನಿಸುವುದರಲ್ಲಿ ಅರ್ಥವಿಲ್ಲ’ ಎಂದರು.

‘ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಜೆ.ಪಿ.ನಗರ ಹಾಗೂ ಭೈರಸಂದ್ರ ಪ್ರದೇಶದಲ್ಲಿ ನಾಳೆ ತೆರವು ಕಾರ್ಯ ನಡೆಯಲಿದೆ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇರುವಂತೆ ಎಲ್ಲ ಮಳಿಗೆಗಳ ಮಾಲೀಕರು ನೋಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.   

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು