ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಯೋಜನೆಗೆ ಮರ ಕಡಿಯುವುದಕ್ಕೆ ತಡೆ

Last Updated 11 ಜೂನ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಮರ ಕಡಿಯುವ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ನಮ್ಮ ಮೆಟ್ರೊ’ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮರ ಕಡಿಯುತ್ತಿರುವುದನ್ನು ಪ್ರಶ್ನಿಸಿ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಪರ ವಕೀಲರು, ‘ಮರ ಪ್ರಾಧಿಕಾರ ಮತ್ತು ತಜ್ಞರ ಸೂಚನೆ ಮೇರೆಗೆ ಮರಗಳನ್ನು ತೆರವು ಮಾಡಲಾಗಿದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮರ ಕಡಿಯುವ ಮತ್ತು ಸ್ಥಳಾಂತರಿಸುವ ವಿಚಾರದಲ್ಲಿ ಬಿಎಂಆರ್‌ಸಿಎಲ್ ಸೂಕ್ತವಾಗಿ ನಡೆದುಕೊಂಡಿಲ್ಲ' ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

‘ಮರ ಪ್ರಾಧಿಕಾರದ ಅಧಿಕಾರಿ, ಮರಗಳನ್ನು ಸ್ಥಳಾಂತರ ಮಾಡಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮರಗಳನ್ನು ಸ್ಥಳಾಂತರಿಸುವ ಕಾರ್ಯ ಅರಣ್ಯ ಅಧಿಕಾರಿಗಳ ತಾಂತ್ರಿಕ ಮೇಲುಸ್ತುವಾರಿಯಲ್ಲಿ ನಡೆದಿದೆಯೇ ಎಂಬುದರ ವರದಿ ನೀಡಬೇಕು’ ಎಂದು ಸೂಚಿಸಿತು.

‘ಮುಂದಿನ ಆದೇಶದವರೆಗೆ ಮೆಟ್ರೊ ಯೋಜನೆಗೆ ಮರಗಳನ್ನು ಕಡಿಯಬಾರದು’ ಎಂದು ಆದೇಶಿಸಿತು. ಜತೆಗೆ ಸ್ಥಳಾಂತರಿಸಿದ ಮರಗಳನ್ನು ಮುಂದಿನ ಮೂರು ವರ್ಷಗಳ ಕಾಲ ಬಿಎಂಆರ್ ಸಿಎಲ್ ಆರೈಕೆ ಮಾಡಬೇಕು' ಎಂದು ನಿರ್ದೇಶಿಸಿ, ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT