ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಮೆಟ್ರೊ: ಕಾಮಗಾರಿ ಚುರುಕು, ಭೂಸ್ವಾಧೀನ ಬಹುತೇಕ ಪೂರ್ಣ

ಭರದಿಂದ ಸಾಗಿದೆ ಕಾಂಕ್ರೀಟ್‌ ಕಂಬಗಳ ನಿರ್ಮಾಣ * ಮಣ್ಣು ಗುಣಮಟ್ಟ ಪರೀಕ್ಷೆ *
Last Updated 21 ಮಾರ್ಚ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಎತ್ತರಿಸಿದ ಮಾರ್ಗದ ಕಾಮಗಾರಿ ಆರಂಭವಾಗಿದ್ದು, ಕಾಂಕ್ರೀಟ್‌ ಕಂಬಗಳ ನಿರ್ಮಾಣ ಕೆಲಸ ಭರದಿಂದ ಸಾಗಿದೆ.

ಕೆ.ಆರ್‌.ಪುರ–ಹೆಬ್ಬಾಳ ಮಾರ್ಗದ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ36.44 ಕಿಲೋ ಮೀಟರ್ ಉದ್ದದ ಮಾರ್ಗದ (2ಬಿ) ಸಿವಿಲ್ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೂರು ಪ್ಯಾಕೇಜ್‌ಗಳ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ. ಈ ಮಾರ್ಗದ ವಯಡಕ್ಟ್ ಮತ್ತು ನಿಲ್ದಾಣ ಗಳಿಗೆ ಅಗತ್ಯ ಇರುವ 2.23 ಲಕ್ಷ ಚದರ ಮೀಟರ್ ಜಾಗದ ಪೈಕಿ 2.15 ಲಕ್ಷ ಚದರ ಮೀಟರ್ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಕೆ.ಆರ್‌.ಪುರದಿಂದ ಹೆಬ್ಬಾಳ ತನಕದ ಕಾಮಗಾರಿ ಇನ್ನೂ ಆರಂಭ ವಾಗಿಲ್ಲ. ಆದರೆ, ಹೆಬ್ಬಾಳದಿಂದ ವಿಮಾನ ನಿಲ್ದಾಣದ ತನಕ ಅಲ್ಲಲ್ಲಿ ಕಾಮಗಾರಿ ಆರಂಭವಾಗಿದೆ. ಹೆಬ್ಬಾಳ ದಿಂದ ಯಲಹಂಕ ತನಕ ಮಣ್ಣು ಪರೀಕ್ಷೆ ಕಾರ್ಯ ನಡೆಯುತ್ತಿದ್ದರೆ, ಯಲಹಂಕದಿಂದ ಮುಂದಕ್ಕೆ ವಿಮಾನ ನಿಲ್ದಾಣದ ತನಕ ಪಿಲ್ಲರ್ ನಿರ್ಮಾಣ ಕಾಮಗಾರಿ ಬಿರುಸಿನಿಂದ ಆರಂಭವಾಗಿದೆ.

ಹೆದ್ದಾರಿ ಮತ್ತು ಪೂರ್ವ ಬದಿಯ ಸರ್ವೀಸ್ ರಸ್ತೆ ನಡುವಿನ ಜಾಗದಲ್ಲಿ ಮೆಟ್ರೊ ರೈಲಿನ ಮಾರ್ಗಕ್ಕೆ ಕಾಂಕ್ರೀಟ್‌ ಕಂಬಗಳ ನಿರ್ಮಾಣವಾಗುತ್ತಿವೆ. ಹೆದ್ದಾರಿಯ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ. ಪೂರ್ವ ಬದಿಯ ಸರ್ವೀಸ್ ರಸ್ತೆಯಲ್ಲೂ ಸಂಚಾರಕ್ಕೆ ಅಷ್ಟೇನೂ ತೊಡಕಾಗಿಲ್ಲ.

‘ಮೆಟ್ರೊ ರೈಲು ಮಾರ್ಗದ ಕಾಮಗಾರಿ ಸರ್ವೀಸ್‌ ರಸ್ತೆ ಮತ್ತು ಹೆದ್ದಾರಿ ನಡುವಿನ ಖಾಲಿ ಜಾಗದಲ್ಲಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸಬೇಕಾಗುತ್ತದೆ’ ಎಂದು ಸ್ಥಳೀಯರು ಹೇಳುತ್ತಾರೆ.

‘ಕೆ.ಆರ್.ಪುರದಿಂದ ಹೆಬ್ಬಾಳ ತನಕದ ಕಾಮಗಾರಿ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮರಗಳನ್ನು ಸ್ಥಳಾಂತರ ಮಾಡುವ ಕಾಮಗಾರಿ ಬಾಕಿ ಇರುವುದರಿಂದ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಆರಂಭವಾಗಿಲ್ಲ’ ಎಂದು ‌ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಅಧಿಕಾರಿಗಳು ಹೇಳುತ್ತಾರೆ.

ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಅದು ಉದ್ಘಾಟನೆಯಾದರೆ ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ನಿರೀಕ್ಷೆ ಇದ್ದು, ರಸ್ತೆ ಮಾರ್ಗದ ಮೇಲೆ ಒತ್ತಡ ಎರಡು ಪಟ್ಟು ಜಾಸ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ.

‌‌ಮೆಟ್ರೊ ರೈಲು ಮಾರ್ಗ ಮತ್ತು ಉಪನಗರ ರೈಲು ಮಾರ್ಗಗಳು ಈ ಒತ್ತಡ ಕಡಿಮೆ ಮಾಡಲಿವೆ. ಮೆಟ್ರೊ ರೈಲು ಮಾರ್ಗ ಬೆಂಗಳೂರು ಪೂರ್ವ ಪ್ರದೇಶದ ಅದರಲ್ಲೂ ಐ.ಟಿ ಹಬ್‌ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.

ವಾಯುನೆಲೆ ಬಳಿ ನೆಲದಡಿ ಮಾರ್ಗ
ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಅನುಮತಿಗಳನ್ನೂ ಬಿಎಂಆರ್‌ಸಿಎಲ್ ಪಡೆದುಕೊಂಡಿದೆ. ಕೆ.ಆರ್.ಪುರದಿಂದ ವಿಮಾನ ನಿಲ್ದಾಣದ ತನಕವೂ ಎತ್ತರಿಸಿದ ಮಾರ್ಗ ಆಗಿದ್ದರೂ, ಯಲಹಂಕ ವಾಯುನೆಲೆಯ ಪಕ್ಕದಲ್ಲಿ ಮಾತ್ರ ನೆಲದಡಿಯಲ್ಲಿ ಮೆಟ್ರೊ ರೈಲು ಮಾರ್ಗ ಇರಲಿದೆ.

ಹೆಬ್ಬಾಳದಿಂದ ವಿಮಾನ ನಿಲ್ದಾಣದ ತನಕ ಹೆದ್ದಾರಿ ಪಕ್ಕದಲ್ಲಿ ಎಲ್ಲೆಡೆ ಸರ್ವೀಸ್ ರಸ್ತೆ ಇದೆ. ಎರಡೂ ಬದಿಯಲ್ಲಿ ವಾಯು ನೆಲೆ ಜಾಗ ಇರುವೆಡೆ ಮಾತ್ರ ಸರ್ವೀಸ್ ರಸ್ತೆ ಇಲ್ಲ. ವಿಮಾನಗಳು ಹಾರಾಟ ಆರಂಭಿಸುವ ಜಾಗ ಆಗಿರುವುದರಿಂದ ಇಲ್ಲಿ ಎತ್ತರಿಸಿದ ಮೆಟ್ರೊ ರೈಲು ಮಾರ್ಗಕ್ಕೂ ಅನುಮತಿ ದೊರೆತಿಲ್ಲ.

ಎತ್ತರಿಸಿದ ರೈಲು ಮಾರ್ಗ ನಿರ್ಮಾಣವಾದರೆ ವಾಯು ನೆಲೆಯಲ್ಲಿನ ವಿಮಾನಗಳ ಕಾರ್ಯಾಚರಣೆ ತೊಡಕಾಗಲಿದೆ ಎಂಬ ಕಾರಣಕ್ಕೆ ಅನುಮತಿ ದೊರಕಿಲ್ಲ. ಆ ಜಾಗದಲ್ಲಿ ಮಾತ್ರ ನೆಲದೊಳಗೆ ರೈಲು ಮಾರ್ಗ ಮಾಡಿಕೊಳ್ಳಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ. ನೆಲದೊಳಗೆ ರೈಲು ಮಾರ್ಗ ಮಾತ್ರ ನಿರ್ಮಾಣವಾಗಲಿದ್ದು, ನಿಲ್ದಾಣಗಳು ಇರುವುದಿಲ್ಲ. ಸುರಂಗ ಮಾರ್ಗದ ಮಾದರಿಯಲ್ಲಿ ಆಳಕ್ಕೆ ಹೋಗುವುದಿಲ್ಲ. ವಿಮಾನ ಹಾರಾಟಕ್ಕೆ ತೊಂದರೆ ಆಗದಂತೆ ನೆಲದೊಳಗೆ ಮಾರ್ಗವನ್ನು ಕೊಂಡೊಯ್ಯಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.

‘ವಿಮಾನ ನಿಲ್ದಾಣದ ಆವರಣದಲ್ಲೇ ಎರಡು ಮೆಟ್ರೊ ನಿಲ್ದಾಣಗಳು ನಿರ್ಮಾಣ ಆಗಲಿವೆ. ಅದಕ್ಕೆ ಬೇಕಿರುವ ಎಲ್ಲಾ ಅನುಮತಿಗಳು ದೊರೆತಿವೆ’ ಎಂದು ಅವರು ಹೇಳಿದರು.

‘ಗಡುವಿಗೆ ಮುನ್ನವೇ ಕಾಮಗಾರಿ ಪೂರ್ಣ’
‘ಯೋಜನೆಗೆ ಅನುಮತಿ ನೀಡುವಾಗ 2026ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನಿಗದಿ ಮಾಡಲಾಗಿದೆ. ಆದರೆ, ಅದಕ್ಕಿಂತ ಒಂದು ವರ್ಷ ಮುನ್ನವೇ, ಅಂದರೆ, 2025ರಲ್ಲೇ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

‘ಒಂದು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಸದ್ಯ 15 ಯಂತ್ರಗಳು ಕೆಲಸದಲ್ಲಿ ತೊಡಗಿವೆ. ಇನ್ನೂ 10 ಯಂತ್ರಗಳನ್ನು ತಂದು ಕಾಮಗಾರಿ ನಿರ್ವಹಿಸಲು ಸೂಚನೆ ನೀಡಲಾಗಿದೆ. ಕೆ.ಆರ್.ಪುರದಿಂದ ಹೆಬ್ಬಾಳ ತನಕದ ಮಾರ್ಗದಲ್ಲಿ ಮರಗಳನ್ನು ಸ್ಥಳಾಂತರಿಸುವ ಕೆಲಸ ನಡೆಯಬೇಕಿದೆ. ಆದ್ದರಿಂದ ಅಲ್ಲಿ ಕಾಮಗಾರಿ ಆರಂಭವಾಗಿಲ್ಲ. ಹೆಬ್ಬಾಳದಿಂದ ವಿಮಾನ ನಿಲ್ದಾಣದ ತನಕ ಮರ ಸ್ಥಳಾಂತರ ಮಾಡುವ ಅಗತ್ಯ ಇಲ್ಲ. ಖಾಲಿ ಇರುವುದರಿಂದ ಕಾಮಗಾರಿ ಆರಂಭವಾಗಿದ್ದು, ತ್ವರಿತಗತಿಯಲ್ಲಿ ಕೈಗೊಳ್ಳಲು ಅನುಕೂಲ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT