ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೋ: ಉತ್ತರ– ಪೂರ್ವ– ದಕ್ಷಿಣ ಬೆಸೆಯುವ 2ಎ, 2ಬಿ ಹಂತ

ನಮ್ಮ ಮೆಟ್ರೊ– ಕಾಯುವಿಕೆಗೆ ಕೊನೆಗೂ ಮುಕ್ತಿ * ಕೇಂದ್ರದಿಂದ ಹಸಿರು ನಿಶಾನೆ
Last Updated 20 ಏಪ್ರಿಲ್ 2021, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ 2ಎ ಮತ್ತು 2ಬಿ ಹಂತಗಳ ಮಾರ್ಗಗಳಿಗೆ ಕೇಂದ್ರ ಸರ್ಕಾರದಿಂದ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಈ ಎರಡು ಹಂತಗಳಲ್ಲಿ ನಿರ್ಮಾಣವಾಗಲಿರುವ ಮಾರ್ಗಗಳು ನಗರದ ಉತ್ತರದ ತುತ್ತತುದಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೊನಿಲ್ದಾಣ, ಪೂರ್ವದ ಕೆ.ಆರ್‌.ಪುರ ಹಾಗೂ ದಕ್ಷಿಣದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ನಿಲ್ದಾಣಗಳನ್ನು ಬೆಸೆಯಲಿವೆ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರದವರೆಗಿನ 19.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ 2ಎ ಹಂತದಲ್ಲಿ ಹಾಗೂ ಕೆ.ಆರ್‌.ಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 38 ಕಿ.ಮೀ ಉದ್ದದ ಮಾರ್ಗ 2 ಬಿ ಹಂತದಲ್ಲಿ ನಿರ್ಮಾಣವಾಗಲಿದೆ. ನಗರದ ಪ್ರಮುಖ ತಾಣಗಳಿಂದಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನೇರವಾಗಿ ಮೆಟ್ರೊ ಸಂಪರ್ಕ ಕಲ್ಪಿಸಲಿರುವ 2ಎ ಮತ್ತು 2 ಬಿ ಹಂತದ ಮಾರ್ಗಗಳು ನಗರದಲ್ಲಿ ಕ್ಷಿಪ್ರ ಸಾರಿಗೆ ಸೌಕರ್ಯವನ್ನು ಹೊಸ ಎತ್ತರಕ್ಕೆ ಒಯ್ಯಲಿವೆ. ಹೊರವರ್ತುಲ ರಸ್ತೆಯಲ್ಲಿ ಸದಾ ಸಮಸ್ಯೆ ತಂದೊಡ್ಡುವ ಸಂಚಾರ ದಟ್ಟಣೆಯ ಶಾಪಕ್ಕೆ ಮುಕ್ತಿ ನೀಡುವಲ್ಲೂ ಈ ಹೊಸ ಮೆಟ್ರೊ ಮಾರ್ಗಗಳು ನೆರವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಈ ಎರಡೂ ಹಂತಗಳ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈ ಹಿಂದೆಯೇ ಅನುಮೋದನೆ ನೀಡಿತ್ತು. ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ ಸ್ವಲ್ಪ ಮೊತ್ತವನ್ನೂ ಬಿಡುಗಡೆ ಮಾಡಿದೆ. ಈ ಅನುದಾನ ಬಳಸಿ ಬಿಎಂಆರ್‌ಸಿಎಲ್‌ ಭೂಸ್ವಾಧೀನ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

2ಎ ಹಂತವನ್ನು ಎರಡು ಪ್ಯಾಕೇಜ್‌ಗಳಲ್ಲಿ ಅನುಷ್ಠಾನಗೊಳಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಪ್ಯಾಕೇಜ್‌–1ರಡಿ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಿಲ್ದಾಣದಿಂದ ಕಾಡುಬೀಸನಹಳ್ಳಿವರೆಗಿನ ಆರು ನಿಲ್ದಾಣಗಳನ್ನು ಒಳಗೊಂಡ ಎತ್ತರಿಸಿದ ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಪ್ಯಾಕೇಜ್‌–2ರ ಅಡಿ ಕಾಡುಬೀಸನಹಳ್ಳಿಯಿಂದ ಕೆ.ಆರ್‌.ಪುರದವರೆಗಿನ ಏಳು ನಿಲ್ದಾಣಗಳನ್ನು ಒಳಗೊಂಡ ಎತ್ತರಿಸಿದ ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. 2ಎ ಹಂತದ ಈ ಎರಡು ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆಯೂ ಬಹುತೇಕ ಮುಕ್ತಾಯದ ಹಂತದಲ್ಲಿದೆ.

2ಬಿ ಹಂತವನ್ನು ನಾಲ್ಕು ಪ್ಯಾಕೇಜ್‌ಗಳ ಮೂಲಕ ಅನುಷ್ಠಾನಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಪ್ಯಾಕೇಜ್‌1ರಡಿ ಕೆ.ಆರ್‌.ಪುರದಿಂದ ಕೆಂಪಾಪುರದವರೆಗಿನ 8 ನಿಲ್ದಾಣಗಳನ್ನು ಒಳಗೊಂಡ ಮಾರ್ಗ, ಪ್ಯಾಕೇಜ್‌–2ರಲ್ಲಿ ಕೆಂಪಾಪುರದಿಂದ ಬಾಗಲೂರು ಕ್ರಾಸ್‌ವರೆಗಿನ ಐದು ನಿಲ್ದಾಣಗಳನ್ನು ಒಳಗೊಂಡ ಮಾರ್ಗ, ಪ್ಯಾಕೇಜ್‌–3ರಲ್ಲಿ ಬೆಟ್ಟಹಲಸೂರು ಹಾಗೂ ದೊಡ್ಡಜಾಲ ನಿಲ್ದಾಣಗಳನ್ನು ಒಳಗೊಂಡ ಮಾರ್ಗಗಳು ನಿರ್ಮಾಣವಾಗಲಿವೆ. ಪ್ಯಾಕೇಜ್‌–4ರಲ್ಲಿ ವಿಮಾನನಿಲ್ದಾಣದಲ್ಲಿ ನಿರ್ಮಾಣವಾಗುವ ಎರಡು ಮೆಟ್ರೊ ನಿಲ್ದಾಣಗಳು ಹಾಗೂ ಡಿಪೊ (ವಿಮಾನನಿಲ್ದಾಣ ಮತ್ತು ಬೈಯಪ್ಪನಹಳ್ಳ್ಳಿ) ಕಾಮಗಾರಿಗಳನ್ನು ನಿಗಮ ಅನುಷ್ಠಾನಗೊಳಿಸಲಿದೆ. 2ಬಿ ಹಂತದ ಟೆಂಡರ್‌ ಪ್ರಕ್ರಿಯೆ ಆರಂಭಿಸುವುದಕ್ಕೂ ನಿಗಮ ಸಿದ್ಧತೆ ನಡೆಸಿದೆ.

‘ಈ ಎರಡು ಹಂತಗಳ ಕಾಮಗಾರಿಗಳಿಗೆ ಕೇಂದ್ರದ ಒಪ್ಪಿಗೆ ಸಿಕ್ಕಿರುವುದರಿಂದ ಟೆಂಡರ್‌ ಪ್ರಕ್ರಿಯೆಗಳನ್ನು ಶೀಘ್ರವೇ ಮುಗಿಸಿ ಕಾಮಗಾರಿಯನ್ನು ಚುರುಕುಗೊಳಿಸಲಿದ್ದೇವೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

2ಎ ಹಂತದ ಮಾರ್ಗವು ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಬೊಮ್ಮಸಂದ್ರ– ಆರ್‌.ವಿ.ರಸ್ತೆ ಮಾರ್ಗವನ್ನು ಸಂಪರ್ಕಿಸುತ್ತದೆ. ಕೆ.ಆರ್‌.ಪುರ–ವಿಮಾನನಿಲ್ದಾಣ ಮಾರ್ಗವು ನಾಗವಾರದಲ್ಲಿ ಗೊಟ್ಟಿಗೆರೆ– ನಾಗವಾರ ಮಾರ್ಗವನ್ನು ಸಂಪರ್ಕಿಸಲಿವೆ. ಹಾಗಾಗಿ ಈ ಹಂತಗಳ ಮಾರ್ಗಗಳು ನಗರದ ಪ್ರಮುಖ ಪ್ರದೇಶಗಳಿಂದ ವಿಮಾನನಿಲ್ದಾಣಕ್ಕೆ ನೇರವಾಗಿ ಮೆಟ್ರೊ ಸಂಪರ್ಕ ಕಲ್ಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿವೆ.

ಬಂಡವಾಳ ಹೊಂದಿಸುವಿಕೆ ಹೇಗೆ?

ನಮ್ಮ ಮೆಟ್ರೊ 2ಎ ಮತ್ತು 2 ಬಿ ಹಂತದ ಕಾಮಗಾರಿಗಳಿಗೆ ಜೈಕಾ ₹ 2,380.83 ಕೋಟಿ (318 ಮಿಲಿಯನ್‌ ಅಮೆರಿಕನ್‌ ಡಾಲರ್‌) ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ₹ 3743.44 ಕೋಟಿ (500 ಮಿಲಿಯನ್‌ ಅಮೆರಿಕನ್‌ ಡಾಲರ್‌) ಸಾಲ ನೀಡಲು ಮುಂದೆ ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ವೆಚ್ಚದಲ್ಲಿ ತಲಾ ಶೇ 15ರಷ್ಟು ಪಾಲನ್ನು ಭರಿಸಲಿವೆ. ಭೂಸ್ವಾಧೀನದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ವಿಮಾನನಿಲ್ದಾಣ ಸ್ವತ್ತುಗಳ ಮೌಲ್ಯದ ನಗದೀಕರಣ ರೂಪದಲ್ಲಿ ಕೆಐಎಎಲ್‌ ₹ 800 ಕೋಟಿ ನೆರವು ಒದಗಿಸಲಿದೆ. ಈ ಮಾರ್ಗವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರಗಳನ್ನು ಬೆಸೆಯಲಿದೆ. ಹಾಗಾಗಿ ಕೆಲವು ನಿಲ್ದಾಣಗಳ ನಿರ್ಮಾಣಕ್ಕೆ ಕಾರ್ಪೊರೇಟ್‌ ಕಂಪನಿಗಳೂ ಹೂಡಿಕೆ ಮಾಡಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ನಗರವು ವಿಶ್ವದರ್ಜೆಯ ಗುಣಮಟ್ಟದ ಸಾರಿಗೆ ಸೌಲಭ್ಯ ಹೊಂದಲಿದೆ.

- ರಾಕೇಶ್ ಸಿಂಗ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೊ 2ಎ ಹಂತ

12 ನಿಲ್ದಾಣಗಳು

19.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ


ನಿಲ್ದಾಣಗಳು

ಸಿಲ್ಕ್‌ಬೋರ್ಡ್‌ ಜಂಕ್ಷನ್‌

ಎಚ್‌ಎಸ್‌ಆರ್‌ ಬಡಾವಣೆ

ಅಗರ ಕೆರೆ

ಇಬ್ಬಲೂರು

ಬೆಳ್ಳಂದೂರು

ಕಾಡು ಬೀಸನಹಳ್ಳಿ

ಮಾರನಹಳ್ಳಿ

ಇಸ್ರೊ

ದೊಡ್ಡನೆಕ್ಕುಂದಿ

ಡಿಆರ್‌ಡಿಒ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್

ಸರಸ್ವತಿ ನಗರ (ಮಹದೇವಪುರ)

ಕೆ.ಆರ್‌.ಪುರ

2ಎ ಹಂತದ ಮಾರ್ಗವನ್ನು ಬಳಸುವ ಪ್ರಯಾಣಿಕರು (ಅಂದಾಜು)

ವರ್ಷ; ಸಂಖ್ಯೆ

2024; 3.38 ಲಕ್ಷ

2031; 4.5 ಲಕ್ಷ

2041; 5.83 ಲಕ್ಷ

ನಮ್ಮ ಮೆಟ್ರೊ 2ಬಿ ಹಂತ

17 ನಿಲ್ದಾಣಗಳು

38 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ

ನಿಲ್ದಾಣಗಳು

ಕೆ.ಆರ್‌.ಪುರ

ಕಸ್ತೂರಿನಗರ

ಹೊರಮಾವು

ಎಚ್‌ಆರ್‌ಬಿಅರ್‌ ಬಡಾವಣೆ

ಕಲ್ಯಾಣ ನಗರ

ಎಚ್‌ಬಿಆರ್‌ ಬಡಾವಣೆ

ನಾಗವಾರ

ವೀರಣ್ಣಪಾಳ್ಯ

ಕೆಂಪಾಪುರ

ಹೆಬ್ಬಾಳ

ಕೊಟ್ಟಿಗೆಪಾಳ್ಯ

ಜಕ್ಕೂರು ಕ್ರಾಸ್

ಯಲಹಂಕ

ಬಾಗಲೂರು ಕ್ರಾಸ್‌

ಬೆಟ್ಟಹಲಸೂರು

ದೊಡ್ಡಜಾಲ

ಅಂತರರಾಷ್ಟ್ರೀಯ ವಿಮಾನನಿಲ್ದಾಣ

2ಬಿ ಹಂತದ ಮಾರ್ಗವನ್ನು ಬಳಸುವ ಪ್ರಯಾಣಿಕರು (ಅಂದಾಜು)

ವರ್ಷ; ಸಂಖ್ಯೆ

2024; 4.34 ಲಕ್ಷ

2031; 8.36 ಲಕ್ಷ

2041; 11.14 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT