ಮಂಗಳವಾರ, ಆಗಸ್ಟ್ 16, 2022
20 °C
ನಮ್ಮ ಮೆಟ್ರೊ: ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಶೀಘ್ರ ಆರಂಭ

‘ಕನಕಪುರ ರಸ್ತೆ ಶೀಘ್ರ ದುರಸ್ತಿಗೊಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ ಇದೇ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಮೆಟ್ರೊ ರೈಲಿನ ಸಾರ್ವಜನಿಕ ಸೇವೆ ಆರಂಭವಾಗಲಿದೆ. ಆದರೆ, ಈ ಮಾರ್ಗದ ನಿರ್ಮಾಣದ ವೇಳೆ ಕನಕಪುರ ರಸ್ತೆ ಹಾಳಾಗಿದ್ದು, ರೈಲು ಸಂಚಾರ ಆರಂಭಕ್ಕೂ ಮುನ್ನವೇ ದುರಸ್ತಿ ಮಾಡಿಸುವಂತೆ ಒತ್ತಾಯಿಸಿ ಬಿಎಂಆರ್‌ಸಿಎಲ್‌ಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

‘ಚೇಂಜ್‌ ಮೇಕರ್ಸ್‌ ಆಫ್‌ ಕನಕಪುರ ರೋಡ್‌’ ಸಂಘಟನೆಯ ಸದಸ್ಯರು ಈ ಕುರಿತು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಪತ್ರ ಬರೆದಿದ್ದಾರೆ. ಈ ಸಂಘಟನೆಯು 50ಕ್ಕೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಒಳಗೊಂಡಿದೆ.

‘ಕಳೆದ ಮೂರು ವರ್ಷಗಳಲ್ಲಿ ಸ್ಥಳೀಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಪದೇ ಪದೇ ಅಗೆದಿದ್ದರಿಂದ ಸಂಚಾರಕ್ಕೂ ತೊಂದರೆಯಾಗಿತ್ತು. ಸಂಚಾರವನ್ನೇ ಬಂದ್ ಮಾಡಿದ ಸಂದರ್ಭದಲ್ಲಿಯೂ ಓಡಾಟಕ್ಕೆ ಕಷ್ಟ ಪಟ್ಟಿದ್ದೇವೆ. ಈಗ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಕೂಡಲೇ ದುರಸ್ತಿ ಮಾಡಿಕೊಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

‘ರಸ್ತೆ ಮತ್ತು ಪಾದಚಾರಿ ಮಾರ್ಗದ ದುರಸ್ತಿಗೆ ಬಿಎಂಆರ್‌ಸಿಎಲ್‌ ₹13 ಕೋಟಿ ಮೊತ್ತದ ಟೆಂಡರ್ ಕರೆದಿತ್ತು. ಪ್ರಾರಂಭದಲ್ಲಿ ಕೆಲಸವೂ ವೇಗವಾಗಿ ನಡೆಯುತ್ತಿತ್ತು. ಆದರೆ, ಈಗ ತುಂಬಾ ಮಂದಗತಿಯಲ್ಲಿ ಕೆಲಸ ಸಾಗುತ್ತಿದೆ’ ಎಂದು ಸಂಘಟನೆಯ ಅಬ್ದುಲ್‌ ಅಲೀಂ ಹೇಳುತ್ತಾರೆ.

‘ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾದ ನಂತರ ಕಾಮಗಾರಿ ಚುರುಕುಗೊಳಿಸಲು ನಿಗಮ ನಿರ್ಧರಿಸಿದಂತಿದೆ. ಆದರೆ, ಒಮ್ಮೆ ರೈಲು ಸಂಚಾರ ಆರಂಭವಾದ ಮೇಲೆ ನಿಗಮವು ರಸ್ತೆಯನ್ನು ಬಿಬಿಎಂಪಿಗೆ ವರ್ಗಾಯಿಸಿ, ದುರಸ್ತಿ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

‘ಪ್ರಾರಂಭದಲ್ಲಿ ಪಾದಚಾರಿ ಮಾರ್ಗಕ್ಕೆ ಕಳಪೆ ಗುಣಮಟ್ಟದ ಟೈಲ್ಸ್‌ಗಳನ್ನು ಹಾಕಲಾಗಿದೆ. ಅವುಗಳು ಈಗಾಗಲೇ  ಒಡೆದು ಹೋಗಿವೆ’ ಎಂದು ಪತ್ರದಲ್ಲಿ ದೂರಲಾಗಿದೆ.

‘ಮಾರ್ಗದಲ್ಲಿ ಮೆಟ್ರೊ ರೈಲು ಸೇವೆ ಆರಂಭವಾದ ನಂತರವೂ ರಸ್ತೆ ದುರಸ್ತಿ ಕಾಮಗಾರಿ ಮುಂದುವರಿಯಲಿದೆ. ರಸ್ತೆ ದುರಸ್ತಿಯಾಗದಿದ್ದರೆ ಮೆಟ್ರೊ ಪ್ರಯಾಣಿಕರಿಗೇ ತೊಂದರೆಯಾಗಲಿದೆ ಎಂಬುದರ ಅರಿವು ಇದೆ. ಟೆಂಡರ್‌ ಪ್ರಕಾರ ಕಾಮಗಾರಿ ಮುಕ್ತಾಯಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್ ಹೇಳಿದರು.

6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರುತ್ತವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು