ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಾಪುರ ಮೆಟ್ರೊ: ಎಂಟು ತಿಂಗಳಲ್ಲಿ ಸರ್ವೆ ಪೂರ್ಣ

Last Updated 21 ನವೆಂಬರ್ 2022, 18:48 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದ್ದು, ಸರ್ಜಾಪುರ–ಹೆಬ್ಬಾಳ(3ಎ) ನಡುವಿನ 37 ಕಿಲೋ ಮೀಟರ್ ಉದ್ದದ ಮಾರ್ಗಕ್ಕೆ ಇನ್ನೂ ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ಅಂದಾಜು ₹15 ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು 2022–23ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಸರ್ಜಾಪುರ– ಹೆಬ್ಬಾಳ ಮೆಟ್ರೊ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ. ಮೆಟ್ರೊ ಜಾಲಕ್ಕೆ ಮಾಸ್ಟರ್‌ಪ್ಲ್ಯಾನ್‌ ರೂಪಿಸುವಾಗಲೇ ಈ ಮಾರ್ಗದ ಪ್ರಸ್ತಾವ ಇತ್ತು. ಕಾರಣಾಂತರಗಳಿಂದ ಅದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿನ ಮೆಟ್ರೊ ಜಾಲವನ್ನು ಈ ಮಾರ್ಗ ಮತ್ತಷ್ಟು ಬಲಪಡಿಸಲಿದೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರೀಕ್ಷೆ.

ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪನಿಗೆ ವಹಿಸಲಾಗಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಸರ್ವೆ ಪೂರ್ಣಗೊಂಡು ಡಿಪಿಆರ್‌ ಸಿದ್ಧವಾಗಲು ಇನ್ನು ಏಳೆಂಟು ತಿಂಗಳು ಬೇಕಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ಹೆಬ್ಬಾಳದಿಂದ ಕೋರಮಂಗಲ ತನಕ ಸುರಂಗ ಮಾರ್ಗ ಹಾಗೂ ಅಲ್ಲಿಂದ ಸರ್ಜಾಪುರದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಐ.ಟಿ ಕಾರಿಡಾರ್‌ನ ಸಂಚಾರ ದಟ್ಟಣೆಯನ್ನು ಈ ಮಾರ್ಗ ಸೀಳಲಿದೆ ಎಂಬ ನಿರೀಕ್ಷೆ ಇದೆ. ಸರ್ವೆ ಕಾರ್ಯ ಮುಗಿದ ಬಳಿಕ ಡಿಪಿಆರ್ ಸಿದ್ಧವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಕೆಯಾಗಬೇಕಿದೆ. ಇವೆಲ್ಲವೂ ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಒಂದು ವರ್ಷ ಕಾಲಾವಕಾಶ ಬೇಕಾಗಲಿದೆ. ಎರಡೂ ಸರ್ಕಾರಗಳಿಂದ ಒಪ್ಪಿಗೆ ದೊರೆತ ಬಳಿಕವೇ ಕಾಮಗಾರಿ ಆರಂಭವಾಗಬೇಕಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ಅಪಾರ್ಟ್‌ಮೆಂಟ್‌ ಬಾಗಿಲಿಗೆ ಬಿಎಂಟಿಸಿ ಬಸ್

ಮೆಟ್ರೊ ರೈಲು ವಿಸ್ತರಿತ ಮಾರ್ಗಗಳ ಕಾಮಗಾರಿ ಚುರುಕಿನಿಂದ ನಡೆಯುತ್ತಿರುವುದು ಒಂದೆಡೆಯಾದರೆ, ಸದ್ಯ ಇರುವ ಮಾರ್ಗಗಳಿಗೆ ಪೀಡರ್ ಬಸ್‌ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲೂ ಬಿಎಂಆರ್‌ಸಿಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ. ಮೆಟ್ರೊ ನಿಲ್ದಾಣಗಳಿಂದ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಬಾಗಿಲಿಗೆ ಮಿನಿ ಬಸ್‌ ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದೆ.

ಈ ಸಂಬಂಧ ಬಿಎಂಟಿಸಿಗೆ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಿದೆ. ಮೆಟ್ರೊ ಫೀಡ್‌ ಸೇವೆಗಾಗಿಯೇ 90 ಮಿನಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ಖರೀದಿಸಿದೆ. ಅವುಗಳನ್ನು ಬಳಸಿಕೊಂಡು ಪ್ರಯಾಣಿಕರ ಮನೆ ಬಾಗಿಲಿಗೆ ಸೇವೆ ಒದಗಿಸಲು ಎರಡೂ ನಿಗಮಗಳ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ವಸಂತನಗರಕ್ಕೆ ಫೀಡರ್ ಬಸ್

ಮೆಟ್ರೊ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಕಬ್ಬನ್ ಉದ್ಯಾನ ಮೆಟ್ರೊ ರೈಲು ನಿಲ್ದಾಣದ ಬಳಿಯಿಂದ ವಸಂತನಗರಕ್ಕೆ ಫೀಡರ್ ಸೇವೆಯನ್ನು ಬಿಎಂಟಿಸಿ ಸೋಮವಾರ ಆರಂಭಿಸಿದೆ.

ಎರಡು ಬಸ್‌ಗಳ ಸೇವೆಯನ್ನು ಆರಂಭಿಸಲಾಗಿದ್ದು, ಕಬ್ಬನ್‌ ಪಾರ್ಕ್ ಮೆಟ್ರೊ ರೈಲು ನಿಲ್ದಾಣದ ಬಳಿಯಿಂದ ಹೊರಡುವ ಬಸ್‌ಗಳು ಕನ್ನಿಂಗ್‌ಹ್ಯಾಂ ರಸ್ತೆ, ಜೈನ್ ಆಸ್ಪತ್ರೆ, ಸರ್ದಾರ್ ಪಟೇಲ್ ಭವನ, ಗಣೇಶ ದೇವಸ್ಥಾನ, ಮೌಂಟ್‌ ಕಾರ್ಮೆಲ್ ಕಾಲೇಜು, ಕಲ್ಪನಾ ಸರ್ಕಲ್, ಸೇಂಟ್ ಆ್ಯನ್ಸ್‌, ಅಲಿ ಅಸ್ಕರ್ ರಸ್ತೆ ಮಾರ್ಗವಾಗಿ ಮತ್ತು ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದ ಬಳಿಗೆ ಬರಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT