ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್ ಖರೀದಿ ವೇಳೆ ಆಡಿದ ಮಾತು ಆಧರಿಸಿ ಚಿನ್ನಾಭರಣ ಕಳವು ಮಾಡಲು ಸಂಚು: ಬಂಧನ

Last Updated 29 ಮೇ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಬಡಾವಣೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಆರೋಪಿ ದಿಲೀಪ್ ಅಲಿಯಾಸ್ ಕುಟ್ಟಿ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಬಡಾವಣೆಯ ಲಕ್ಷ್ಮಿದೇವಿನಗರದ ದಿಲೀಪ್, ಲಗ್ಗೆರೆ ಪ್ರೀತಿನಗರದ ನಿವಾಸಿಯೊಬ್ಬರ ಮನೆಯಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ. ಆತನಿಂದ 194 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರು ಕುಟುಂಬ ಸಮೇತ ಕನಕಪುರದ ಕೆರೆ ಮೇಗಲದೊಡ್ಡಿಗೆ ಮೇ 23ರಂದು ಬೆಳಿಗ್ಗೆ ಹೋಗಿದ್ದರು. ಅಂದು ರಾತ್ರಿಯೇ ಮನೆಯ ಬಾಗಿಲು ಮೀಟಿ ಒಳನುಗ್ಗಿದ್ದ ಆರೋಪಿ, ಬೀರುವಿನಲ್ಲಿದ್ದ ಚಿನ್ನಾಭರಣ ಕದ್ದೊಯ್ದಿದ್ದ. ದೂರುದಾರರು ಮರುದಿನ ಮನೆಗೆ ಬಂದಾಗ ವಿಷಯ ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯ ಆಧರಿಸಿ ಅರೋಪಿಯನ್ನು ಸೆರೆಹಿಡಿಯಲಾಗಿದೆ’ ಎಂದೂ ತಿಳಿಸಿದರು.

‘ಧೂಮಪಾನಿಯಾಗಿದ್ದ ಆರೋಪಿ, ಸಿಗರೇಟ್ ಸೇದಲೆಂದು ಸ್ಥಳೀಯ ಅಂಗಡಿಯೊಂದಕ್ಕೆ ಹೋಗಿದ್ದ. ಅದೇ ಅಂಗಡಿಗೆ ಮನೆ ಮಾಲೀಕ ಸಹ ಬಂದಿದ್ದರು. ನಿತ್ಯವೂ ಒಂದೇ ಸಿಗರೇಟ್‌ ಖರೀದಿಸುತ್ತಿದ್ದ ಮಾಲೀಕ, ಅಂದು ಬಹಳ ಸಿಗರೇಟ್‌ ಪಡೆದಿದ್ದರು. ಅದನ್ನು ಅಂಗಡಿಯವರು ಪ್ರಶ್ನಿಸಿದ್ದರು. ಆಗ ಮಾಲೀಕ, ‘ಮನೆಯವರೆಲ್ಲ ಊರಿಗೆ ಹೊರಟಿದ್ದೇವೆ. ಅಲ್ಲಿ ನನಗೆ ಸಿಗರೇಟ್‌ ಸಿಗುವುದಿಲ್ಲ. ಹೀಗಾಗಿ, ಇಲ್ಲಿಂದಲೇ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಹೇಳಿದ್ದರು.’

‘ಮಾಲೀಕನ ಮಾತು ಕೇಳಿದ್ದ ಆರೋಪಿ, ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT