ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಟಕೋತ್ಸವದ ಮೂಲಕ ನವಚೈತನ್ಯ: ಕೆ.ವಿ. ನಾಗರಾಜ ಮೂರ್ತಿ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ
Published 8 ಆಗಸ್ಟ್ 2024, 15:46 IST
Last Updated 8 ಆಗಸ್ಟ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಬಳಿಕ ಸ್ತಬ್ಧವಾಗಿದ್ದ ರಂಗಭೂಮಿಗೆ ನವಚೈತನ್ಯ ತುಂಬಲು ನಾಟಕೋತ್ಸವ, ನಾಟಕ ರಚನಾ ಸ್ಪರ್ಧೆ ಸೇರಿ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ತಿಳಿಸಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಮೂರು ದಿನಗಳ ನಾಟಕೋತ್ಸವಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಆ ವಿಭಾಗಕ್ಕೆ ಬರುವ ಜಿಲ್ಲೆಗಳ ರಂಗಭೂಮಿ ಬೆಳವಣಿಗೆ ಕುರಿತಂತೆ ವಿಚಾರ ಸಂಕಿರಣ ಆಯೋಜಿಸಿ, ಕಳೆದ 50 ವರ್ಷಗಳ ರಂಗಭೂಮಿ ಇತಿಹಾಸವನ್ನು ಸುವರ್ಣ ಕರ್ನಾಟಕ ಮಹೋತ್ಸವದ ಸವಿನೆನಪಿಗಾಗಿ ದಾಖಲಿಸಲಾಗುತ್ತದೆ. ಪ್ರತಿ ಕಂದಾಯ ವಿಭಾಗಕ್ಕೆ ನಾಲ್ಕರಂತೆ 16 ಜಿಲ್ಲೆಗಳಲ್ಲಿ ಕಾಲೇಜು ರಂಗ ಶಿಬಿರಗಳನ್ನು ನಡೆಸಲಾಗುತ್ತದೆ’ ಎಂದು ಹೇಳಿದರು. 

‘ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾಲೇಜು ನಾಟಕೋತ್ಸವ ಆಯೋಜಿಸಲಾಗುವುದು. ನಾಟಕ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗುವುದು. ಪ್ರಥಮ ಬಹುಮಾನ ಪಡೆದ ತಂಡಕ್ಕೆ ₹ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಹೊಸ ನಾಟಕಗಳ ಕೊರತೆ ನೀಗಿಸಲು ನಾಟಕ ರಚನಾ ತರಬೇತಿ ಶಿಬಿರ ನಡೆಸಲಾಗುತ್ತದೆ’ ಎಂದು ತಿಳಿಸಿದರು.

‘ನವದೆಹಲಿ, ಮುಂಬೈ, ಗೋವಾ ಮತ್ತು ಚೆನ್ನೈನಲ್ಲಿ ಹೊರ ರಾಜ್ಯ ನಾಟಕೋತ್ಸವವನ್ನು ಈ ವರ್ಷಾಂತ್ಯದೊಳಗೆ ಆಯೋಜಿಸಲಾಗುತ್ತದೆ. ಪ್ರತಿ ತಿಂಗಳ ಮೂರನೆ ಶನಿವಾರ ಇಲ್ಲಿನ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಡಿ ಹವ್ಯಾಸಿ ರಂಗಭೂಮಿ ಮತ್ತು ವೃತ್ತಿ ರಂಗಭೂಮಿಯ ನಾಟಕಗಳ ಪ್ರದರ್ಶನ ನಡೆಸಲಾಗುತ್ತದೆ’ ಎಂದು ಹೇಳಿದರು. 

ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಹಾಗೂ ಸದಸ್ಯ ಲವ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT