ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯ ಕೇಳುವ ಎಚ್ಚರಿಕೆ ಬಂದಾಗ ಸಂವಿಧಾನ ಉಸಿರಾಡುತ್ತದೆ’

Last Updated 26 ನವೆಂಬರ್ 2022, 19:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಕೇಳುವ ನೈತಿಕ ಎಚ್ಚರಿಕೆ ಬಂದ ದಿನದಿಂದ ಸಂವಿಧಾನ ಸರಿಯಾದ ವೇಗದಲ್ಲಿ ಉಸಿರಾಡುತ್ತದೆ ಎಂದು ಚಿಂತಕ ವೆಂಕಟೇಶ್‌ ನೆಲ್ಲುಕುಂಟೆ ಅಭಿಪ್ರಾಯಪಟ್ಟರು.

ಬಸವನಗುಡಿ ನ್ಯಾಷನಲ್ ಕಾಲೇಜಿನ ಸರಣಿ ಉಪನ್ಯಾಸ ಮಾಲಿಕೆಯಡಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ಎಂದರೆ ಅನೇಕ ಭಾಷೆ ಮತ್ತು ವೃತ್ತಿಗಳಿಂದ ಕೂಡಿರುವಬಹುತ್ವದ ದೇಶ. ವೈವಿಧ್ಯಮಯವಾದ ದೇಶವನ್ನು ಒಟ್ಟಿಗೆ ಸೇರಿಸಿ ಮುನ್ನೆಡೆಸುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಸಂವಿಧಾನ ರಚನೆ ಮಾಡಿಕೊಳ್ಳುವ ಅನಿವಾರ್ಯ ಸೃಷ್ಟಿಯಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಇದಕ್ಕೂ ಮೊದಲು ರಾಜರು ಅವರದೇ ಆದ ಶಾಸನಗಳನ್ನು ರೂಪಿಸಿಕೊಂಡಿದ್ದರು. ಅವುಗಳಿಗೆಲ್ಲಾ ಮೂಲವಾಗಿ ಮನುಸ್ಮೃತಿ ಇತ್ತು. ಚಾತುರ್ವರ್ಣ ವ್ಯವಸ್ಥೆ ಇತ್ತು, ನ್ಯಾಯವು ಜಾತಿಗಳ ಶ್ರೇಷ್ಠತೆಯ ಆಧಾರದಲ್ಲಿ ನಿರ್ಧಾರವಾಗುತ್ತಿತ್ತು. ಆದರೆ, ಸಂವಿಧಾನ ಈ ಎಲ್ಲಾ ತಾರತಮ್ಯಗಳನ್ನು ಮೀರಿ ಎಲ್ಲರೂ ಸಮಾನರು ಎಂಬುದನ್ನು ಸಾರಿತು’ ಎಂದು ಹೇಳಿದರು.

ದೇಶಕ್ಕೆ ಈಗ ಸಂವಿಧಾನವೇ ಅತ್ಯುನ್ನತ. ಅದನ್ನು ಮೀರಿದ್ದು ಯಾವುದೂ ಇಲ್ಲ. ಈ ಅತ್ಯುನ್ನತಿಯನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ದಿಕ್ಕಿನಲ್ಲಿ ಎಲ್ಲರೂ ಎಚ್ಚರಗೊಳ್ಳಬೇಕು ಎಂದರು.

ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಎಚ್‌.ರಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ, ಪ್ರಾಂಶುಪಾಲ ಸತೀಶ್ ಕಾರಂತ್, ಉಪಪ್ರಾಂಶುಪಾಲ ಪ್ರೊ. ಪಿ.ಎಲ್.ರಮೇಶ್, ಸಾಹಿತ್ಯ ವೇದಿಕೆಯ ಸಂಚಾಲಕ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT