ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಪ್ರಶಸ್ತಿ ಬಾಚಿದ ಕರ್ನಾಟಕಕ್ಕೆ ಅಗ್ರಸ್ಥಾನ: ಡಿಸಿಎಂ ಅಶ್ವತ್ಥ ನಾರಾಯಣ

ರಾಷ್ಟ್ರೀಯ ನವೋದ್ಯಮ ಸ್ಪರ್ಧೆ-2020
Last Updated 7 ಅಕ್ಟೋಬರ್ 2020, 12:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗಾಗಿ ನವೋದ್ಯಮ ಭಾರತ’ ವತಿಯಿಂದ ಇತ್ತೀಚೆಗೆ ನಡೆಸಲಾಗಿದ್ದ ಸ್ಪರ್ಧೆಗೆ ಕರ್ನಾಟಕ ರಾಜ್ಯದಿಂದ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗುವ ಜೊತೆಗೆ ಇಲ್ಲಿನ ಹಲವಾರು ನವೋದ್ಯಮಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ’ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿರುವ 36 ನವೋದ್ಯಮಗಳ ಪೈಕಿ ಕರ್ನಾಟಕ ರಾಜ್ಯದ 14 ನವೋದ್ಯಮಗಳು ಹಾಗೂ 1 ವೇಗವರ್ಧಕ (ಆಕ್ಸಲರೇಟರ್) ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿವೆ. ಈ ಸ್ಪರ್ಧೆಗೆ ದೇಶದಾದ್ಯಂತ ನವೋದ್ಯಮಗಳಿಂದ ಸಲ್ಲಿಕೆಯಾಗಿದ್ದ 1,641 ಅರ್ಜಿಗಳ ಪೈಕಿ 418 ಅರ್ಜಿಗಳು ಕರ್ನಾಟಕ ರಾಜ್ಯದಿಂದ ಸಲ್ಲಿಕೆಯಾಗಿದ್ದವು. ಇದು ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ 26ರಷ್ಟಿರುವುದು ಗಮನಾರ್ಹ ಅಂಶ ಎಂದು ಅವರು ಹೇಳಿದ್ದಾರೆ.

ಕೃಷಿ, ಶಿಕ್ಷಣ, ಇಂಧನ, ಉದ್ದಿಮೆ ತಾಂತ್ರಿಕತೆಗಳು, ಆರೋಗ್ಯ, ಉದ್ಯಮ 4.0, ಬಾಹ್ಯಾಕಾಶ, ಪ್ರವಾಸೋದ್ಯಮ, ನಗರ ಸೇವೆಗಳು ಸೇರಿದಂತೆ ಇತ್ಯಾದಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈಗ ರಾಷ್ಟ್ರೀಯ ಮಟ್ಟದಲ್ಲಿ ವಿಜೇತಗೊಂಡಿರುವ 14 ಉದ್ಯಮಗಳ ಪೈಕಿ 11 ನವೋದ್ಯಮಗಳು ಕರ್ನಾಟಕ ನವೋದ್ಯಮ ಕೋಶದಿಂದ ನಡೆಸಲಾಗಿದ್ದ ಎಲಿವೇಟ್/ ಐಡಿಯಾ 2ಪಿಒಸಿ ಅನುದಾನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದು, ಜಯ ಗಳಿಸಿದ್ದವು ಎಂದು ಅವರು ವಿವರಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸ್ಪಂದಿಸಿ ಕರ್ನಾಟಕ ಸರ್ಕಾರದ ಪರಿಪೋಷಕಗಳು (ಇನ್ ಕ್ಯುಬೇಟರ್ಸ್), ಹೊಸ ತಲೆಮಾರಿನ ಪರಿಪೋಷಣಾ ಜಾಲ (ನೈನ್) ಸಂಸ್ಥೆಗಳು, ಉತ್ಕೃಷ್ಠತಾ ಕೇಂದ್ರಗಳು ಮತ್ತು ತಾಂತ್ರಿಕ ವ್ಯಾಪಾರೋದ್ಯಮ ಪರಿಪೋಷಕಗಳ (ಟಿಬಿಐ) ಮೂಲಕ ವೆಬಿನಾರ್ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಲು ಕಾರಣವಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜೇತ ನವೋದ್ಯಮಗಳು

ಕೃಷಿ ವಿಭಾಗ: ಸಲ್ಲಿಕೆಯಾಗಿದ್ದ ಅರ್ಜಿಗಳು 36 (ಅತ್ಯಧಿಕ)- ಮಂಡ್ಯ ಆರ್ಗ್ಯಾನಿಕ್ಸ್ (ಕಾರ್ಯ ಕ್ಷೇತ್ರ- ಕೃಷಿ ವಲಯದಲ್ಲಿ ರೈತರ ತೊಡಗಿಸಿಕೊಳ್ಳುವಿಕೆ ಹಾಗೂ ಶಿಕ್ಷಣ)

ಶಿಕ್ಷಣ ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 40 (ಅತ್ಯಧಿಕ)-ರೊಬೊಟ್‌ ಗುರು

ಇಂಧನ ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 26 (ಅತ್ಯಧಿಕ)- ಎಸ್ಯಾ ಸಾಫ್ಟ್

ಆರೋಗ್ಯ ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 69 (ಅತ್ಯಧಿಕ)- ನಿರಮಯಿ ಹೆಲ್ತ್ ಅನಲಿಟಿಕ್ಸ್, ಬೊನಯು (ಜುಬ್ಇನ್) ಲೈಫ್ ಸೈನ್ಸಸ್, ಇನೌಮೇಷನ್ ಮೆಡಿಕಲ್ ಡಿವೈಸಸ್

ಉದ್ಯಮ 4.0 ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 56 (ಅತ್ಯಧಿಕ)- ಅಪ್ ಟೈಮ್ ಎಐ, ಮಿನಿಯನ್ ಲ್ಯಾಬ್ಸ್, ಸ್ಕೇಪಿಕ್ ಇನ್ನೊವೇಷನ್ಸ್ ಪ್ರೈವೇಟ್ ಲಿಮಿಟೆಡ್, ಜಿಂಜರ್ ಮೈಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ಬಾಹ್ಯಾಕಾಶ ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 7 (ಅತ್ಯಧಿಕ)- ಬೆಲ್ಲಾಟ್ರಿಕ್ಸ್ ಏರೋಸ್ಪೇಸ್

ಪ್ರವಾಸೋದ್ಯಮ ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 16 (ಅತ್ಯಧಿಕ)- ಹೈವೇ ಡಿಲೈಟ್

ನಗರ ಸೇವೆಗಳು ವಿಭಾಗ: ಸ್ಪರ್ಧಿಸಿದ್ದ ಆ್ಯಪ್‌ಗಳು 34 (ಅತ್ಯಧಿಕ)- ವಿಕೆಡ್ರೈಡ್ ಅಡ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್

ವಿಶೇಷ ವಿಭಾಗ (ಮಹಿಳಾ ನೇತೃತ್ವದ ನವೋದ್ಯಮಗಳು): ಅಜೂಕ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್

ಅತ್ಯುತ್ತಮ ವೇಗವರ್ಧಕ: ಬ್ರಿಗೇಡ್ ರೀಪ್ ಆಕ್ಸಲರೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT